ದೇಶ

ದೆಹಲಿಯಲ್ಲಿ ಕೆಲಸದ ವೇಗ ಬಹುಪಟ್ಟು ಹೆಚ್ಚುತ್ತದೆ, ಕೆಲಸಕ್ಕೆ ಅಡ್ಡಿಪಡಿಸಿದ ಅಧಿಕಾರಿಗಳು ಕ್ರಮ ಎದುರಿಸಬೇಕಾಗುತ್ತದೆ: ಕೇಜ್ರಿವಾಲ್

Ramyashree GN

ನವದೆಹಲಿ: ಆಡಳಿತಾತ್ಮಕ ಸೇವೆಗಳ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಕೆಲಸದ ವೇಗವು ಹಲವಾರು ಪಟ್ಟು ಹೆಚ್ಚಾಗುತ್ತದೆ ಮತ್ತು ಜನರ ಕೆಲಸಕ್ಕೆ ಅಡಚಣೆ ಉಂಟು ಮಾಡುವ ಅಧಿಕಾರಿಗಳು ಶೀಘ್ರದಲ್ಲೇ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ. 

ಸಾರ್ವಜನಿಕ ಸುವ್ಯವಸ್ಥೆ, ಪೊಲೀಸ್ ಮತ್ತು ಭೂಮಿಯನ್ನು ಹೊರತುಪಡಿಸಿ ಸೇವೆಗಳ ಮೇಲೆ ದೆಹಲಿ ಸರ್ಕಾರವು ಶಾಸಕಾಂಗ ಮತ್ತು ಕಾರ್ಯಾಂಗ ಅಧಿಕಾರವನ್ನು ಹೊಂದಿದೆ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದ ನಂತರ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿನ ಅಧಿಕಾರ ಸಂಬಂಧ ದೆಹಲಿ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ನಡುವೆ ಉಂಟಾಗಿದ್ದ ವಿವಾದ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳಿದ್ದ ಸಂವಿಧಾನಿಕ ಪೀಠ, ಜನರಿಂದ ಆಯ್ಕೆಯಾದ ಸರ್ಕಾರಕ್ಕೆ ಆಡಳಿತಾತ್ಮಕ ವಿಷಯಗಳ ಬಗ್ಗೆ ನಿಯಂತ್ರಣ ಇರಬೇಕು ಎಂದು ಸರ್ವಾನುಮತದ ತೀರ್ಪು ನೀಡಿದೆ.

ಈ ಮೂಲಕ ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರದ ನಡುವಣ ಹಗ್ಗ ಜಗ್ಗಾಟದಲ್ಲಿ ಆಮ್ ಆದ್ಮಿ ಸರ್ಕಾರದ ಕೈ ಮೇಲಾಗಿದೆ.

ದೆಹಲಿ ಸಚಿವಾಲಯದಲ್ಲಿ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ದೆಹಲಿಯ ಜನರ ಕೆಲಸಕ್ಕೆ ಅಡ್ಡಿಪಡಿಸುವ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಕಠಿಣ ಕ್ರಮವನ್ನು ಎದುರಿಸಲಿದ್ದಾರೆ. 'ನನ್ನ ಕೈಗಳನ್ನು ಕಟ್ಟಿ ಈಜಲು ನೀರಿನಲ್ಲಿ ಎಸೆಯಲಾಗಿತ್ತು. ಆದರೆ, ನಾವು ತೇಲುವಲ್ಲಿ ಯಶಸ್ವಿಯಾಗಿದ್ದೇವೆ. ಎಲ್ಲಾ ಅಡೆತಡೆಗಳ ನಡುವೆಯೂ ನಾವು ದೆಹಲಿಯಲ್ಲಿ ಉತ್ತಮ ಕೆಲಸ ಮಾಡಿದೆವು' ಎಂದು ಅವರು ಹೇಳಿದರು.

'ತಮ್ಮ ಹೋರಾಟದುದ್ದಕ್ಕೂ ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ದೆಹಲಿಯ ಜನತೆಗೆ ಧನ್ಯವಾದ ಅರ್ಪಿಸಿದ ಕೇಜ್ರಿವಾಲ್, 'ನೇರ, ಸ್ಪಂದಿಸುವ ಮತ್ತು ಸಹಾನುಭೂತಿಯುಳ್ಳ ಸರ್ಕಾರವನ್ನು ನಿರ್ಮಿಸಲು ಕೆಲಸ ಮಾಡುತ್ತೇನೆ' ಎಂದು ಹೇಳಿದರು.

'ನಾವು ದೇಶಕ್ಕೆ ಶಿಕ್ಷಣದ ಮಾದರಿಯನ್ನು ನೀಡಿದ್ದೇವೆ. ಕೆಲಸ ಈಗ ಮೊದಲು ನಡೆಯುತ್ತಿದ್ದ 10 ಪಟ್ಟು ವೇಗದಲ್ಲಿ ನಡೆಯುತ್ತದೆ. ದೆಹಲಿಯು ಈಗ ಇಡೀ ದೇಶಕ್ಕೆ ಸಮರ್ಥ ಆಡಳಿತದ ಮಾದರಿಯನ್ನು ಪ್ರಸ್ತುತಪಡಿಸುತ್ತದೆ. ಎಲ್‌ಜಿ ವಿಕೆ ಸಕ್ಸೇನಾ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆಯುವುದಾಗಿ ಹೇಳಿದರು.

ಭ್ರಷ್ಟಾಚಾರ ನಿಗ್ರಹ ದಳದ ಬಗ್ಗೆ ಕೇಳಿದ ಪ್ರಶ್ನೆಗೆ, ಎಸಿಬಿ ನಮ್ಮೊಂದಿಗಿಲ್ಲ. ಆದರೆ, ವಿಜಿಲೆನ್ಸ್ ಈಗ ನಮ್ಮೊಂದಿಗೆ ಇರುತ್ತದೆ. ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು ಎಂದರು.

SCROLL FOR NEXT