ದೇಶ

ಬ್ರಹ್ಮೋಸ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ: ನಿಖರ ಗುರಿ ಛೇದಿಸಿದ ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ

Srinivasamurthy VN

ಭುವನೇಶ್ವರ: ಭಾರತದ ಅತ್ಯಂತ ಯಶಸ್ವೀ ಕ್ಷಿಪಣಿ ಬ್ರಹ್ಮೋಸ್‌ ನ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದ್ದು, ನಿಗದಿತ ಸಮಯದಲ್ಲಿ ನಿಖರ ಗುರಿಯನ್ನು ತಲುಪುವ ಮೂಲಕ ಕ್ಷಿಪಣಿ ಯಶಸ್ವಿಯಾಗಿದೆ.

‘ಭಾರತೀಯ ನೌಕಾಪಡೆ ನಡೆಸಿದ ಬ್ರಹ್ಮೋಸ್‌ ಸೂಪರ್‌ ಸಾನಿಕ್‌ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯು ಯಶಸ್ವಿಯಾಗಿದೆ. ಭಾರತೀಯ ನೌಕಾಪಡೆಗೆ ಹೊಸದಾಗಿ ಸೇರ್ಪಡೆಯಾಗಿರುವ, ಸ್ವದೇಶಿ ನಿರ್ಮಿತ ಕ್ಷಿಪಣಿ ನಾಶಕ ಯುದ್ಧನೌಕೆ ಐಎನ್‌ಎಸ್‌ ಮರ್ಮುಗಾವೊ ಮೂಲಕ ಇದೇ ಮೊದಲ ಬಾರಿಗೆ ಬ್ರಹ್ಮೋಸ್‌ ಕ್ಷಿಪಣಿಯನ್ನು ಉಡಾವಣೆ ಮಾಡಿದ್ದು, ಅದು ನಿಖರವಾಗಿ ದಾಳಿ ನಡೆಸಿದೆ.

ಇದು ರಕ್ಷಣಾ ಕ್ಷೇತ್ರದಲ್ಲಿ ದೇಶವು ಆತ್ಮನಿರ್ಭರತೆ ಸಾಧಿಸುತ್ತಿರುವುದರ ದ್ಯೋತಕವಾಗಿದೆ. ನೌಕಾಪಡೆಯ ಶಕ್ತಿಯನ್ನೂ ಅನಾವರಣಗೊಳಿಸಿದೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. 

ನೌಕಾಪಡೆಯು ಯಾವ ಸ್ಥಳದಿಂದ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಸಿದೆ ಎಂಬುದು ಗೊತ್ತಾಗಿಲ್ಲ. ಬ್ರಹ್ಮೋಸ್‌ ಏರೋಸ್ಪೇಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿರುವ ಸೂಪರ್‌ ಸಾನಿಕ್‌ ಕ್ಷಿಪಣಿಗಳು ಶಬ್ದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಇವುಗಳನ್ನು ಸಬ್‌ಮರಿನ್‌, ಹಡಗುಗಳು, ವಿಮಾನಗಳ ಮೂಲಕ ಉಡಾವಣೆ ಮಾಡಬಹುದಾಗಿದೆ.

SCROLL FOR NEXT