ದೇಶ

ಜೆನೆರಿಕ್ ಔಷಧಿ ಬರೆಯಿರಿ, ಇಲ್ಲವೆ ಕ್ರಮ ಎದುರಿಸಿ: ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕೇಂದ್ರ ಎಚ್ಚರಿಕೆ

Lingaraj Badiger

ನವದೆಹಲಿ: ಕೇಂದ್ರ ಸರ್ಕಾರ ನಡೆಸುವ ಆಸ್ಪತ್ರೆಗಳು ಮತ್ತು ಸಿಜಿಎಚ್‌ಎಸ್‌ ವೆಲ್‌ನೆಸ್‌ ಸೆಂಟರ್‌ಗಳ ವೈದ್ಯರು ಜೆನೆರಿಕ್‌ ಔಷಧಗಳನ್ನು ಬರೆದುಕೊಡಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ಎಚ್ಚರಿಕೆ ನೀಡಿದೆ.

ಆದೇಶದ ಪ್ರಕಾರ, ಕೇಂದ್ರ ಸರ್ಕಾರಿ ಆಸ್ಪತ್ರೆಗಳು, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್) ಕ್ಷೇಮ ಕೇಂದ್ರಗಳು ಮತ್ತು ಪಾಲಿಕ್ಲಿನಿಕ್‌ಗಳ ವೈದ್ಯರಿಗೆ ಜೆನೆರಿಕ್ ಔಷಧಿಗಳನ್ನು ಮಾತ್ರ ಬರೆಯುವಂತೆ ಪದೇಪದೆ ಸೂಚನೆ ನೀಡಲಾಗಿದೆ.

ಇದರ ಹೊರತಾಗಿಯೂ, ವೈದ್ಯರು ಕೆಲವು ಸಂದರ್ಭಗಳಲ್ಲಿ ಬ್ರ್ಯಾಂಡೆಡ್ ಔಷಧಿ ಬರೆಯುವುದನ್ನು ಮುಂದುವರೆಸಿದ್ದಾರೆ. ಇದನ್ನು ಸಕ್ಷಮ ಪ್ರಾಧಿಕಾರವು ಕಟ್ಟುನಿಟ್ಟಾಗಿ ಪರಿಶೀಲಿಸಿದ ನಂತರ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ ಅತುಲ್ ಗೋಯೆಲ್ ಈ ಆದೇಶ ಹೊರಡಿಸಿದ್ದಾರೆ.

ಇದನ್ನು ಎಲ್ಲಾ ಸಂಸ್ಥೆಗಳ ಮುಖ್ಯಸ್ಥರು ಗಮನಿಸಬೇಕು ಮತ್ತು ಅವರ ಅಡಿಯಲ್ಲಿ ಕೆಲಸ ಮಾಡುವ ವೈದ್ಯರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪಾಲಿಸದ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

SCROLL FOR NEXT