ದೇಶ

ಲೈಂಗಿಕ ದೌರ್ಜನ್ಯ: ಯುವ ಕಾಂಗ್ರೆಸ್ ಮುಖ್ಯಸ್ಥ ಬಿವಿ ಶ್ರೀನಿವಾಸ್‌ಗೆ ಸುಪ್ರೀಂನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು

Vishwanath S

ನವದೆಹಲಿ: ಉಚ್ಛಾಟಿತ ಅಸ್ಸಾಂ ಯುವ ಕಾಂಗ್ರೆಸ್ ಅಧ್ಯಕ್ಷೆ ಅಂಗಿತಾ ದತ್ತಾ ಅವರ ಲೈಂಗಿಕ ಕಿರುಕುಳದ ದೂರಿನ ಮೇಲೆ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸಂಜಯ್ ಕರೋಲ್ ಅವರ ವಿಭಾಗೀಯ ಪೀಠವು ರಾಯಪುರದಲ್ಲಿ 2023ರ ಫೆಬ್ರವರಿ 24ರಂದು ಅಸ್ಸಾಂನಲ್ಲಿ ದಾಖಲಾಗಿದ್ದ ಲೈಂಗಿಕ ಕಿರುಕುಳದ ಪ್ರಕರಣವನ್ನು ಗಮನಿಸಿದೆ. ಅಲ್ಲದೆ ದೂರು ಸಲ್ಲಿಸುವ ಮೊದಲು ದೂರುದಾರರು ತಮ್ಮ ಟ್ವೀಟ್‌ಗಳಲ್ಲಿ ಮತ್ತು ಮಾಧ್ಯಮ ಸಂದರ್ಶನಗಳಲ್ಲಿ ಆರೋಪಿಸಿದ್ದನ್ನು ಗಮನಿಸಿದ್ದು ಇನ್ನು ಎಫ್‌ಐಆರ್ ದಾಖಲಿಸುವಲ್ಲಿ ಸುಮಾರು ಎರಡು ತಿಂಗಳ ವಿಳಂಬವನ್ನು ಪರಿಗಣಿಸಿ, ಅರ್ಜಿದಾರರು ಮಧ್ಯಂತರ ರಕ್ಷಣೆಗೆ ಅರ್ಹರಾಗಿರುತ್ತಾರೆ. ಬಂಧನದ ಸಂದರ್ಭದಲ್ಲಿ, ಅರ್ಜಿದಾರರನ್ನು ರೂ. 50,000/- ನಿರೀಕ್ಷಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಾವು ನಿರ್ದೇಶಿಸುತ್ತೇವೆ ಎಂದರು.

ಮೇ 22ರಂದು ತನಿಖಾಧಿಕಾರಿಯ ಮುಂದೆ ಮತ್ತು ಅಧಿಕಾರಿಯ ನಿರ್ದೇಶನದಂತೆ ನಂತರದ ದಿನಾಂಕಗಳಲ್ಲಿ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ತನಿಖೆಗೆ ಸಹಕರಿಸುವಂತೆ ಪೀಠವು ಶ್ರೀನಿವಾಸ್ ಗೆ ತಿಳಿಸಿದೆ. ಈ ಪ್ರಕರಣ ಸಂಬಂಧ ಮುಂದಿನ 2023ರ ಜುಲೈನಲ್ಲಿ ವಿಚಾರಣೆ ನಡೆಯಲಿದೆ.

ನ್ಯಾಯಾಲಯದಲ್ಲಿ ಯಾವ ವಾದಗಳನ್ನು ನೀಡಲಾಯಿತು?
ಶ್ರೀನಿವಾಸ್ ಪರ ವಾದ ಮಂಡಿಸಿದ ಹಿರಿಯ ವಕೀಲ ಡಾ.ಎ.ಎಂ.ಸಿಂಘ್ವಿ, ದೂರುದಾರರು ಪಕ್ಷದಲ್ಲಿ ತಾರತಮ್ಯದ ಬಗ್ಗೆ ದೂರಿ ಹಲವು ಟ್ವೀಟ್ ಮಾಡಿದ್ದಾರೆ. ದೂರು ದಾಖಲಿಸುವ ಮುನ್ನ ಆರು ಮಾಧ್ಯಮಗಳಿಗೆ ಸಂದರ್ಶನವನ್ನೂ ನೀಡಿದ್ದರು. ಅವರ ಹೇಳಿಕೆಗಳಲ್ಲಿ ಲೈಂಗಿಕ ದೌರ್ಜನ್ಯದ ಆರೋಪಗಳಿಲ್ಲ. ಆರೋಪಗಳು ಫೆಬ್ರವರಿಗೆ ಸಂಬಂಧಿಸಿದ್ದರೂ, ಅವರು ಏಪ್ರಿಲ್ ವರೆಗೆ ಮೌನವಾಗಿದ್ದರು. ಅವರೂ ಒಬ್ಬ ವಕೀಲರೇ ಹೊರತು ಸಾಮಾನ್ಯ ವ್ಯಕ್ತಿಯಲ್ಲ ಎಂದು ಸಿಂಘ್ವಿ ವಾದಿಸಿದ್ದರು.

ಮೇ 4 ರಂದು, ಗುವಾಹಟಿ ಹೈಕೋರ್ಟ್‌ನ ಏಕ ಪೀಠವು ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿದ್ದ ಮನವಿಯನ್ನು ವಜಾಗೊಳಿಸಿತು. ಅಲ್ಲದೆ ಈ ಸಂಬಂಧ ಶ್ರೀನಿವಾಸ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಇನ್ನೊಂದು ಅರ್ಜಿಯನ್ನೂ ಹೈಕೋರ್ಟ್ ತಿರಸ್ಕರಿಸಿತ್ತು. ಎಫ್‌ಐಆರ್ ರಾಜಕೀಯ ಪ್ರೇರಿತವಾಗಿದೆ ಎಂಬುದಕ್ಕೆ ಯಾವುದೇ ಸುಳಿವು ಇಲ್ಲ ಎಂದು ನ್ಯಾಯಮೂರ್ತಿ ಅಜಿತ್ ಬೋರ್ತಕೂರ್ ಅವರ ಏಕ ಪೀಠವು ಹೇಳಿದ್ದು, ತನಿಖೆ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಗಮನಿಸಿ ಹಸ್ತಕ್ಷೇಪ ಮಾಡಲು ನಿರಾಕರಿಸಿದೆ. ಅರ್ಜಿಯನ್ನು ವಜಾಗೊಳಿಸಿದ ಪೀಠವು, ನಿವೃತ್ತಿಯ ಅಂಚಿನಲ್ಲಿರುವ ನ್ಯಾಯಾಧೀಶರು ನಿವೃತ್ತಿಯ ನಂತರದ ಪ್ರಯೋಜನಗಳ ನಿರೀಕ್ಷೆಯಲ್ಲಿ ಸರ್ಕಾರದ ಪರವಾಗಿ ಆದೇಶಗಳನ್ನು ಹೊರಡಿಸುತ್ತಾರೆ ಎಂದು ಸೂಚಿಸಿದ್ದಕ್ಕಾಗಿ ಶ್ರೀನಿವಾಸ್ ಪರ ವಕೀಲರಿಗೆ ಛೀಮಾರಿ ಹಾಕಿತು.

SCROLL FOR NEXT