ದೇಶ

ಸಿಬಿಐ ನೂತನ ನಿರ್ದೇಶಕರಾಗಿ ಪ್ರವೀಣ್ ಸೂದ್ ಅಧಿಕಾರ ಸ್ವೀಕಾರ

Nagaraja AB

ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರು ಗುರುವಾರ ಸಿಬಿಐನ ನೂತನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಎರಡು ವರ್ಷಗಳ ಕಾಲ ಅವರು ಈ ಹುದ್ದೆಯಲ್ಲಿರುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ಕೇಂದ್ರ ಕಚೇರಿಯಲ್ಲಿ ನಿರ್ಗಮಿತ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರು ಪ್ರವೀಣ್ ಸೂದ್ ಅವರಿಗೆ ಕೇಂದ್ರೀಯ ತನಿಖಾ ಸಂಸ್ಥೆಯ ಉಸ್ತುವಾರಿಯನ್ನು ಹಸ್ತಾಂತರಿಸಿದರು. ಸೂದ್ ಕರ್ನಾಟಕ ಕೇಡರ್ ನ 1986ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದು, ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಜೈಸ್ವಾಲ್ ನಂತರ ದೇಶದ ಅತ್ಯಂತ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನೊಳಗೊಂಡ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಸೂದ್ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಮುಂದಿನ ಸಿಬಿಐ ನಿರ್ದೇಶಕರಾಗಿ ಸೂದ್ ಅವರನ್ನು ಆಯ್ಕೆ ಮಾಡುವ ಕುರಿತು ಕಾಂಗ್ರೆಸ್ ನಾಯಕ ಚೌಧರಿ  ಅಸಮ್ಮತಿ ಸೂಚಿಸಿರುವುದಾಗಿ ವರದಿಯಾಗಿದೆ.

ಜೈಸ್ವಾಲ್ ಅವರಿಂದ ಅಧಿಕಾರ ವಹಿಸಿಕೊಂಡ ದಿನದಿಂದ ಮುಂದಿನ 2 ವರ್ಷಗಳ ಕಾಲ ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶದಲ್ಲಿ ತಿಳಿಸಿದೆ. 

SCROLL FOR NEXT