ದೇಶ

ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್, ಓರ್ವನ ಬಂಧನ

Ramyashree GN

ಅಮೃತಸರ: ಪಂಜಾಬ್‌ನ ಅಮೃತಸರದಲ್ಲಿ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ (ಐಬಿ) ಬಳಿ ಮತ್ತೊಂದು ಡ್ರೋನ್ ಅನ್ನು ಹೊಡೆದುರುಳಿಸಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಮಾದಕವಸ್ತುಗಳೊಂದಿಗೆ ಕಳ್ಳಸಾಗಣೆದಾರನನ್ನು ಶನಿವಾರ ಸಂಜೆ ಬಂಧಿಸಿದೆ ಎಂದು ಪಡೆ ಭಾನುವಾರ ತಿಳಿಸಿದೆ.

ನಿನ್ನೆ ರಾತ್ರಿ 9.35 ರ ಸುಮಾರಿಗೆ ಡ್ರೋನ್‌ನ ಝೇಂಕರಿಸುವ ಶಬ್ದ ಕೇಳಿದ ನಂತರ ಅಮೃತಸರದ ಖುರ್ದ್ ಜಿಲ್ಲೆಯ ಧನೋ ಗ್ರಾಮದ ಬಳಿ ನಿಯೋಜನೆಗೊಂಡಿದ್ದ ಬಿಎಸ್‌ಎಫ್ ಸಿಬ್ಬಂದಿ ಡ್ರೋನ್ ಅನ್ನು ಹೊಡೆದುರುಳಿಸಿದರು ಮತ್ತು ಒಳನುಗ್ಗುವುದನ್ನು ತಡೆದರು.

ಆ ಪ್ರದೇಶದಲ್ಲಿ ಹುಡುಕಾಟ ನಡೆಸಿದ ನಂತರ ಧನೋಯ್ ಗ್ರಾಮದ ಕೃಷಿ ಭೂಮಿಯಲ್ಲಿ ಡ್ರೋನ್ (ಕ್ವಾಡ್‌ಕಾಪ್ಟರ್, ಡಿಜೆಐ ಮ್ಯಾಟ್ರಿಸ್ ಆರ್‌ಟಿಕೆ 300) ಅನ್ನು ಪಡೆಗಳು ವಶಪಡಿಸಿಕೊಂಡಿವೆ ಎಂದು ಭಾರತ-ಪಾಕಿಸ್ತಾನ ಗಡಿ ಕಾಯುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ತಿಳಿಸಿದೆ.

ಈಮಧ್ಯೆ, ಧನೋಯ್ ಗ್ರಾಮದ ಬಳಿ ನಿಯೋಜಿಸಲಾದ ಪಡೆಗಳು ಗ್ರಾಮದ ಕಡೆಗೆ ಮೂವರು ವ್ಯಕ್ತಿಗಳು ಓಡಿ ಬರುತ್ತಿರುವುದನ್ನು ನೋಡಿ, ಅವರನ್ನು ತಡೆದಿದ್ದಾರೆ ಮತ್ತು ಮೂರು ಪ್ಯಾಕೆಟ್‌ಗಳ (ಅಂದಾಜು 3.4 ಕೆಜಿ ತೂಕ) ಶಂಕಿತ ಮಾದಕವಸ್ತುಗಳನ್ನು ಹೊಂದಿರುವ ಚೀಲದೊಂದಿಗೆ ಓರ್ವ ಶಂಕಿತನನ್ನು ಬಂಧಿಸಿದ್ದಾರೆ ಎಂದು ಬಿಎಸ್‌ಎಫ್ ತಿಳಿಸಿದೆ.

ಈ ಮೂಲಕ, ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವ ಪಾಕಿಸ್ತಾನದ ಮತ್ತೊಂದು ನೀಚ ಪ್ರಯತ್ನವನ್ನು ಸೇನೆಯ ಜಾಗರೂಕ ಪಡೆಗಳು ವಿಫಲಗೊಳಿಸಿದವು ಎಂದು ಬಿಎಸ್ಎಫ್ ಹೇಳಿದೆ.

ಭಾನುವಾರ ಮುಂಜಾನೆ, ಅಮೃತಸರದ ಭಾರತ-ಪಾಕಿಸ್ತಾನ ಗಡಿಯಲ್ಲಿ ಬಿಎಸ್ಎಫ್ ಹೆರಾಯಿನ್ ಪ್ಯಾಕೆಟ್ ಅನ್ನು ವಶಪಡಿಸಿಕೊಂಡಿದೆ ಮತ್ತು ಎರಡು ಪ್ರತ್ಯೇಕ ಘಟನೆಗಳಲ್ಲಿ ಡ್ರೋನ್ ಅನ್ನು ಹೊಡೆದುರುಳಿಸಿದೆ. ಅದೇ ರಾತ್ರಿ ಅಮೃತಸರ ಸೆಕ್ಟರ್‌ನಲ್ಲಿ ಪಾಕಿಸ್ತಾನದ ಡ್ರೋನ್‌ನಿಂದ ಬೀಳಿಸಲಾದ ಮತ್ತೊಂದು ಶಂಕಿತ ಹೆರಾಯಿನ್ (2.2 ಕೆಜಿ) ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ಎಫ್ ಪಂಜಾಬ್ ಫ್ರಾಂಟಿಯರ್ ತಿಳಿಸಿದೆ.

SCROLL FOR NEXT