ದೇಶ

ಕುಸ್ತಿಪಟುಗಳು ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಮಾಡುವಂತಿಲ್ಲ; ಬೇರೆ ಕಡೆ ಅವಕಾಶ: ದೆಹಲಿ ಪೊಲೀಸರು

Nagaraja AB

ನವದೆಹಲಿ: ಭಾರತೀಯ ಕುಸ್ತಿ ಅಸೋಸಿಯೇಷನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು  ಕಳೆದೊಂದು ತಿಂಗಳಿನಿಂದ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ನಿನ್ನೆ ಅಲ್ಲಿಂದ ಅವರನ್ನು ತೆರವುಗೊಳಿಸಿದ ನಂತರ ಅಲ್ಲಿ ಪ್ರತಿಭಟನೆ ನಡೆಸುವಂತಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಜಂತರ್ ಮಂತರ್ ನಲ್ಲಿ ಕುಸ್ತಿಪಟುಗಳ ಪ್ರತಿಭಟನೆ ಸುಗಮವಾಗಿ ನಡೆಯುತಿತ್ತು. ಭಾನುವಾರ  ಪದೇ ಪದೇ ಮಾಡಿದ ಮನವಿಗಳನ್ನು ನಿರ್ಲಕ್ಷಿಸಿ ಪ್ರತಿಭಟನಾಕಾರರು ಕಾನೂನು ಉಲ್ಲಂಘಿಸಿದರು. ಆದ್ದರಿಂದ ಅಲ್ಲಿಂದ ಅವರನ್ನು ತೆರವುಗೊಳಿಸಿ ಧರಣಿ ಕೊನೆಗೊಳಿಸಿದ್ದೇವೆ ಎಂದು ನವದೆಹಲಿ ಉಪ ಪೊಲೀಸ್ ಆಯುಕ್ತರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಮುಂದೆ ಮತ್ತೆ ಧರಣಿ ನಡೆಸಲು ಕುಸ್ತಿಪಟುಗಳು ಅರ್ಜಿ ಸಲ್ಲಿಸಿದರೆ ಜಂತರ್ ಮಂತರ್ ಹೊರತುಪಡಿಸಿ ಸೂಕ್ತವಾದ ಸ್ಥಳದಲ್ಲಿ ಪ್ರತಿಭಟನೆಗೆ ಅವಕಾಶ ನೀಡುವುದಾಗಿ ಅವರು  ತಿಳಿಸಿದ್ದಾರೆ. 

ನೂತನ ಸಂಸತ್ ಭವನದ ಕಡೆಗೆ ತೆರಳುತ್ತಿದ್ದ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದ ನಂತರ  ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಸೇರಿದಂತೆ ಸೇರಿದಂತೆ 109 ಪ್ರತಿಭಟನಾಕಾರರನ್ನು ಜಂತರ್ ಮಂತರ್‌ನಲ್ಲಿ ಬಂಧಿಸಲಾಯಿತು. ಮಹಿಳಾ ಬಂಧಿತರನ್ನು ಭಾನುವಾರ ಸಂಜೆ ನಂತರ ಬಿಡುಗಡೆ ಮಾಡಲಾಯಿತು.

SCROLL FOR NEXT