ದೇಶ

ನೇಪಾಳ ಜನರಿಗೆ ಅಗತ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧ: ಪ್ರಧಾನಿ ಮೋದಿ

Manjula VN

ನವದೆಹಲಿ: ನೇಪಾಳದಲ್ಲಿ ಪ್ರಬಲ ಭೂಕಂಪದಿಂದ ಉಂಟಾದ ಜೀವ ಹಾನಿ ಮತ್ತು ಅಪಾರ ಆಸ್ತಿ ಹಾನಿಯಾಗಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿರುವ ಅವರು, ''ಭಾರತವು ತನ್ನ ನೆರೆಯ ರಾಷ್ಟ್ರ ನೆಪಾಳದ ಬೆಂಬಲಕ್ಕೆ ನಿಂತಿದೆ. ಸಾಧ್ಯವಿರುವ ಎಲ್ಲ ನೆರವುಗಳನ್ನು ನೀಡಲು ಸಿದ್ಧವಾಗಿದೆ'' ಎಂದು ಹೇಳಿದ್ದಾರೆ.

ಭಾರತ ನೇಪಾಳದ ಜನರೊಂದಿಗೆ ನಿಂತಿದೆ. ಅಲ್ಲಿನ ಜನರಿಗೆ ಸಾಧ್ಯವಿರುವ ಎಲ್ಲಾ ಸಹಾಯಗಳನ್ನು ಮಾಡಲು ಸಿದ್ದವಾಗಿದೆ. ದುರ್ಘಟನೆಯಿಂದ ದುಖಃತಪ್ತ ಕುಟುಂಬಗಳೊಂದಿಗೆ ನಾವು ಭಾಗಿಯಾಗಿದ್ದೇವೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇವೆಂದು ತಿಳಿಸಿದ್ದಾರೆ.

ಶುಕ್ರವಾರ ಮಧ್ಯರಾತ್ರಿ ಪಶ್ಚಿಮ ನೇಪಾಳದ ದೂರದ ಪರ್ವತ ಪ್ರದೇಶದಲ್ಲಿ 6.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ ಪರಿಣಾಮ, ಕನಿಷ್ಠ 128 ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ, ನೂರಾರು ಮಂದಿ ಗಾಯಗೊಂಡಿದ್ದಾರೆ.

ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ಸಂಶೋಧನಾ ಕೇಂದ್ರದ ಪ್ರಕಾರ, ರಾತ್ರಿ 11.47ಕ್ಕೆ ಜಾಜರ್ಕೋಟ್ ಜಿಲ್ಲೆಯಲ್ಲಿ ಭೂಕಂಪನ ದಾಖಲಾಗಿದೆ.

ನೇಪಾಳದ ಜಾಜರ್ಕೋಟ್, ರುಕುಮ್ ಪಶ್ಚಿಮದ ಪ್ರತ್ಯೇಕ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ತೀವ್ರಗೊಂಡಿದೆ. ಹಲವೆಡೆ ಸಂಪರ್ಕ ಕಡಿತಗೊಂಡಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶನಿವಾರ ಬೆಳಿಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT