ದೇಶ

ಪ್ರಧಾನಿ ಮೋದಿ ಪ್ರಚಾರಕ್ಕೆ ಬರುವ ಮುನ್ನ ಇ.ಡಿ, ಐಟಿ ಮತ್ತು ಸಿಬಿಐ ಕಳುಹಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ

Ramyashree GN

ಜೋಧ್‌ಪುರ: ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯನ್ನು ನರೇಂದ್ರ ಮೋದಿಯವರ 'ಜವಾನರು' ಎಂದು ಲೇವಡಿ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರಕ್ಕೆ ಬರುವ ಮುನ್ನವೇ ಅವರು ಪ್ರತಿಪಕ್ಷಗಳ ನಾಯಕರನ್ನು ಗುರಿಯಾಗಿಸಲು ಕೇಂದ್ರದ ತನಿಖಾ ಸಂಸ್ಥೆಗಳನ್ನು ಕಳುಹಿಸುತ್ತಾರೆ ಎಂದು ಹೇಳಿದರು.

ನವೆಂಬರ್ 25ರ ವಿಧಾನಸಭಾ ಚುನಾವಣೆಗೆ ಮುನ್ನ ರಾಜಸ್ಥಾನದ ಜೋಧ್‌ಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದು ಚುನಾವಣಾ ಸಮಯವಾದ್ದರಿಂದ ಪ್ರಧಾನಿ ಈಗ ಬಡವರ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಹೇಳಿದರು.
ಉಚಿತ ಪಡಿತರ ಯೋಜನೆಯನ್ನು ಐದು ವರ್ಷಗಳವರೆಗೆ ವಿಸ್ತರಿಸುವುದಾಗಿ ಪ್ರಧಾನಿ ಘೋಷಿಸಿದ ಕೆಲವೇ ದಿನಗಳ ಬಳಿಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಸರ್ಕಾರವು ಬಡವರಿಗೆ ತೊಂದರೆ ನೀಡುತ್ತಿದೆ ಮತ್ತು ಅದಾನಿ ಅವರಂತಹ ಕೈಗಾರಿಕೋದ್ಯಮಿ ಸ್ನೇಹಿತರನ್ನು ಬೆಂಬಲಿಸುತ್ತಿದೆ. ಯಾವುದೇ ಒಬ್ಬ ರಾಜ, ಮುಖ್ಯಮಂತ್ರಿ ಅಥವಾ ಪ್ರಧಾನಿ ಸಾಮಾನ್ಯವಾಗಿ ಬಡವರಿಗೆ ಸಹಾಯ ಮಾಡುತ್ತಾರೆ. ಆದರೆ, ಒಬ್ಬ ವ್ಯಕ್ತಿ ಮಾತ್ರ ಬಡವರಿಂದ ಮತ ಪಡೆದ ನಂತರ ಶ್ರೀಮಂತರಿಗೆ ಸಹಾಯ ಮಾಡುತ್ತಾರೆ ಎಂದು ಆರೋಪಿಸಿದರು.

'ಅವರ (ಮೋದಿ) ಆಡಳಿತದ ಅವಧಿಯಲ್ಲಿ, ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಮತ್ತು ಬಡವರು ಬಡವರಾಗುತ್ತಿದ್ದಾರೆ. ಈಗ ಚುನಾವಣೆಗಳು ಸಮೀಪಿಸುತ್ತಿರುವ ಕಾರಣ ಪ್ರಧಾನಿ ಮೋದಿ ಬಡವರ ಬಗ್ಗೆ ಯೋಚಿಸುತ್ತಿದ್ದಾರೆ' ಎಂದು ವ್ಯಂಗ್ಯವಾಡಿದರು.

ಚುನಾವಣೆ ನಡೆಯಲಿರುವ ರಾಜ್ಯಗಳ ಕಾಂಗ್ರೆಸ್ ನಾಯಕರ ಮೇಲೆ ತನಿಖಾ ಸಂಸ್ಥೆಗಳ ಇತ್ತೀಚಿನ ದಾಳಿಯನ್ನು ಉಲ್ಲೇಖಿಸಿದ ಅವರು, ಚುನಾವಣಾ ಪ್ರಚಾರಕ್ಕೆ ತೆರಳಿ ಭಾಷಣ ಮಾಡುವ ಮುನ್ನ ಪ್ರಧಾನಿ ಮೋದಿ ಅವರು ಜಾರಿ ನಿರ್ದೇಶನಾಲಯ (ಇ.ಡಿ), ಆದಾಯ ತೆರಿಗೆ ಮತ್ತು ಕೇಂದ್ರದ ತನಿಖಾ ದಳವನ್ನು (ಸಿಬಿಐ) ಪ್ರಚಾರಕ್ಕಾಗಿ ಕಳುಹಿಸುತ್ತಾರೆ ಎಂದು ದೂರಿದರು. 

ಅವರು ಕೇಂದ್ರ ತನಿಖಾ ಸಂಸ್ಥೆಗಳನ್ನು ಪ್ರಧಾನಿ ಮೋದಿಯ 'ಜವಾನರು' ಎಂದೂ ಕರೆದರು.

ನವೆಂಬರ್ 25ರ ಚುನಾವಣೆಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಾಮಪತ್ರ ಸಲ್ಲಿಸಿದ ನಂತರ ಸಾರ್ವಜನಿಕ ರ್ಯಾಲಿಯನ್ನು ನಡೆಸಲಾಯಿತು.

SCROLL FOR NEXT