ದೇಶ

ಶಾಲಾ ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಗೆ ಇ.ಡಿ ಸಮನ್ಸ್

Ramyashree GN

ಕೋಲ್ಕತ್ತಾ: ಆಪಾದಿತ ಶಾಲಾ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ನವೆಂಬರ್ 9 ರಂದು ತನ್ನ ಮುಂದೆ ಹಾಜರಾಗುವಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ನೀಡಿದೆ ಎಂದು ಟಿಎಂಸಿ ನಾಯಕರೊಬ್ಬರು ಬುಧವಾರ ತಿಳಿಸಿದ್ದಾರೆ.

ಬ್ಯಾನರ್ಜಿ ಅವರು ಗುರುವಾರ ಇ.ಡಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಪಶ್ಚಿಮ ಬಂಗಾಳದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮತ್ತು ಟಿಎಂಸಿ ವಕ್ತಾರೆ ಶಶಿ ಪಂಜಾ ಹೇಳಿದ್ದಾರೆ. 

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ 'ದ್ವೇಷ ರಾಜಕಾರಣ'ಕ್ಕೆ ಬಲಿಯಾಗಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ನಿರ್ಣಾಯಕ ಚುನಾವಣೆಗೆ ಮುನ್ನ ವಿಪಕ್ಷಗಳ ನಾಯಕರಿಗೆ ಕಿರುಕುಳ ನೀಡಲು ಬಿಜೆಪಿ ಇಂತಹ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿ ವಕ್ತಾರ ಶಮಿಕ್ ಲಾಹಿರಿ ಮಾತನಾಡಿ, ಪಕ್ಷಕ್ಕೆ ಸೇಡಿನ ರಾಜಕಾರಣದಲ್ಲಿ ನಂಬಿಕೆ ಇಲ್ಲ. ಕೇಂದ್ರದ ತನಿಖಾ ಸಂಸ್ಥೆಗಳಿಂದ ಸಮನ್ಸ್ ನೀಡುವುದು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದ್ದು, ಟಿಎಂಸಿಗೆ ಯಾವುದೇ ಸಮಸ್ಯೆ ಇದ್ದರೆ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ರಾಜ್ಯಕ್ಕೆ ನೀಡಬೇಕಿದ್ದ ಅನುದಾನವನ್ನು ತಡೆಹಿಡಿದಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ದೆಹಲಿಯಲ್ಲಿ ಅಕ್ಟೋಬರ್ 3ರಂದು ಟಿಎಂಸಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿತ್ತು. ಆದರೆ, ಅದೇ ದಿನ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಸಮನ್ಸ್ ನೀಡಿತ್ತು. ಅಂದು ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಅಕ್ಟೋಬರ್ 9ರಂದು ಹಾಜರಾಗುವಂತೆ ಇ.ಡಿ ಈ ಹಿಂದೆ ಸಮನ್ಸ್ ನೀಡಿತ್ತು.

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 13 ರಂದು ಸುಮಾರು ಒಂಬತ್ತು ಗಂಟೆಗಳ ಕಾಲ ಇ.ಡಿ ವಿಚಾರಣೆ ಎದುರಿಸಿದ್ದ ಅಭಿಷೇಕ್ ಬ್ಯಾನರ್ಜಿ, 'ಇಂಡಿಯಾ' ಮೈತ್ರಿಕೂಟ ಸಭೆಯಲ್ಲಿ ಭಾಗವಹಿಸುವುದನ್ನು ತಡೆಯುವ ಪ್ರಯತ್ನವಾಗಿದೆ ಎಂದು ಹೇಳಿದ್ದರು. 

ಅಭಿಷೇಕ್ ಬ್ಯಾನರ್ಜಿ ಅವರು ಕಲ್ಲಿದ್ದಲು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 2021ರಲ್ಲಿ ರಾಷ್ಟ್ರ ರಾಜಧಾನಿಯ ತನಿಖಾ ಸಂಸ್ಥೆಯ ಕಚೇರಿಯಲ್ಲಿ ಮತ್ತು 2022 ರಲ್ಲಿ ಮತ್ತೊಮ್ಮೆ ಕೋಲ್ಕತ್ತಾದಲ್ಲಿ ಇ.ಡಿ ವಿಚಾರಣೆಯನ್ನು ಎದುರಿಸಿದ್ದಾರೆ.

SCROLL FOR NEXT