ದೇಶ

ಮಧ್ಯ ಪ್ರದೇಶ, ಛತ್ತೀಸಗಢದಲ್ಲಿ ವಿಧಾನಸಭೆ ಚುನಾವಣೆ; ಬಿರುಸಿನಿಂದ ಸಾಗಿದ ಮತದಾನ

Ramyashree GN

ಭೋಪಾಲ್: 230 ಸದಸ್ಯ ಬಲದ ವಿಧಾನಸಭೆಗೆ ಶುಕ್ರವಾರ ಬೆಳಗ್ಗೆ ಮತದಾನ ಆರಂಭವಾದ ಮಧ್ಯಪ್ರದೇಶದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಒಟ್ಟು 10.39 ಪ್ರತಿಶತ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಸೇರಿದಂತೆ 2,533 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಗ್ಗೆ 9 ಗಂಟೆಯವರೆಗೆ ರಾಜ್ಯದಲ್ಲಿ ಶೇ 10.39ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ ಎಸ್‌ಟಿಗೆ 47 ಮತ್ತು ಎಸ್‌ಸಿಗೆ 35 ಮೀಸಲು ಸೇರಿದಂತೆ ಎಲ್ಲಾ 230 ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಚೌಹಾಣ್ ಮತ್ತು ಅವರ ಕುಟುಂಬ, ಕಮಲ್ ನಾಥ್ ಅವರ ಕುಟುಂಬ, ರಾಜ್ಯ ಬಿಜೆಪಿ ಅಧ್ಯಕ್ಷ ವಿಡಿ ಶರ್ಮಾ, ಗೃಹ ಸಚಿವ ನರೋತ್ತಮ್ ಮಿಶ್ರಾ, ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವ ಯಶೋಧರ ರಾಜೇ ಸಿಂಧಿಯಾ, ಕೈಗಾರಿಕಾ ಸಚಿವ ರಾಜವರ್ಧನ್ ಸಿಂಗ್ ದತ್ತಿಗಾಂವ್ ಮತ್ತು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಅನುಪಮ್ ರಾಜನ್ ಆರಂಭಿಕವಾಗಿ ಮತ ಚಲಾಯಿಸಿದವರಲ್ಲಿ ಪ್ರಮುಖರು.

ಮತದಾನದ ನಂತರ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್ ಮತ್ತು ಕುಟುಂಬಸ್ಥರು

ರಾಘೋಗಢದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರ ಪುತ್ರ ಹಾಗೂ ಮಾಜಿ ಸಚಿವ ಜೈವರ್ಧನ್ ಸಿಂಗ್ ಕೂಡ ತಮ್ಮ ಕುಟುಂಬ ಸದಸ್ಯರೊಂದಿಗೆ ಮತ ಚಲಾಯಿಸಿದ್ದಾರೆ. ಹೊಶಂಗಾಬಾದ್ ಸೇರಿದಂತೆ ರಾಜ್ಯದ ವಿವಿಧ ಮತಗಟ್ಟೆಗಳಲ್ಲಿ ಮಹಿಳೆಯರು ಮತದಾನಕ್ಕಾಗಿ ಸರದಿಯಲ್ಲಿ ನಿಂತಿರುವುದು ಕಂಡುಬಂದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ನಕ್ಸಲ್ ಪೀಡಿತ ಪ್ರದೇಶಗಳಾದ ಬಾಲಾಘಾಟ್, ಮಂಡ್ಲಾ ಮತ್ತು ದಿಂಡೋರಿ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಮತಗಟ್ಟೆಗಳಲ್ಲಿ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 64,626 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 64,523 ಮುಖ್ಯ ಮತಗಟ್ಟೆಗಳು ಮತ್ತು 103 ಸಹಾಯಕ ಕೇಂದ್ರಗಳಾಗಿದ್ದು, ಇಲ್ಲಿ ಮತದಾರರ ಸಂಖ್ಯೆ 1,500ಕ್ಕಿಂತ ಹೆಚ್ಚಿದೆ. 2,87,82,261 ಪುರುಷರು, 2,71,99,586 ಮಹಿಳೆಯರು ಮತ್ತು 1,292 ತೃತೀಯಲಿಂಗಿಗಳು ಸೇರಿದಂತೆ ಒಟ್ಟು 5,60,58,521 ಮತದಾರರು ಇದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಸೇರಿ ಒಟ್ಟು 2,533 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 2,280 ಪುರುಷರು, 252 ಮಹಿಳೆಯರು ಮತ್ತು ತೃತೀಯ ಲಿಂಗಿ ವ್ಯಕ್ತಿಗಳು ರಾಜ್ಯ ವಿಧಾನಸಭೆಗೆ ಪ್ರವೇಶಿಸಲು ಸ್ಪರ್ಧಿಸುತ್ತಿದ್ದಾರೆ.

ಛತ್ತೀಸ್‌ಗಢ: ಎರಡನೇ ಹಂತದ  ಚುನಾವಣೆಯಲ್ಲಿ ಬೆಳಗ್ಗೆ 9 ಗಂಟೆವರೆಗೆ ಶೇ 6 ರಷ್ಟು ಮತದಾನ

ರಾಯ್ಪುರ: ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿಯ ಬಿಗಿ ಭದ್ರತೆಯಲ್ಲಿ ಶುಕ್ರವಾರ ಬೆಳಗ್ಗೆ ಆರಂಭವಾದ ಛತ್ತೀಸ್‌ಗಢದ ಎರಡನೇ ಹಂತದ ಚುನಾವಣೆಗೆ 70 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ಸುಮಾರು ಶೇ 6 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗರಿಯಾಬಂದ್ ಜಿಲ್ಲೆಯ ನಕ್ಸಲ್ ಪೀಡಿತ ಬಿಂದ್ರನವಗಢ್ ಕ್ಷೇತ್ರದ ಒಂಬತ್ತು ಮತಗಟ್ಟೆಗಳನ್ನು ಹೊರತುಪಡಿಸಿ 70 ಕ್ಷೇತ್ರಗಳಲ್ಲಿ ಭದ್ರತಾ ಕಾರಣಗಳಿಗಾಗಿ 7 ಗಂಟೆಗೆ ಬದಲಾಗಿ ಬೆಳಿಗ್ಗೆ 8 ಗಂಟೆಗೆ ಮತದಾನ ಪ್ರಕ್ರಿಯೆ ಪ್ರಾರಂಭವಾಯಿತು ಮತ್ತು ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ ಎಂದು ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಳಗ್ಗೆ 9 ಗಂಟೆಯವರೆಗೆ 70 ಕ್ಷೇತ್ರಗಳಲ್ಲಿ ಶೇ 5.71 ರಷ್ಟು ಮತದಾನವಾಗಿದೆ ಎಂದು ಅವರು ಹೇಳಿದರು.

ರಾಜ್ಯದ ಮುಖ್ಯ ಚುನಾವಣಾಧಿಕಾರಿ ರೀನಾ ಬಾಬಾ ಸಾಹೇಬ್ ಕಂಗಳೆ ಅವರು ರಾಜಧಾನಿಯ ಧರಂಪುರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಎರಡನೇ ಹಂತದ ಚುನಾವಣೆಯು ಮುಖ್ಯಮಂತ್ರಿ ಭೂಪೇಶ್ ಬಘೇಲ್, ಉಪ ಮುಖ್ಯಮಂತ್ರಿ ಟಿಎಸ್ ಸಿಂಗ್ ದೇವ್, ಎಂಟು ರಾಜ್ಯ ಸಚಿವರು ಮತ್ತು ನಾಲ್ವರು ಸಂಸದರು ಸೇರಿ ರಾಜಕೀಯ ಪ್ರಮುಖರ ಚುನಾವಣಾ ಭವಿಷ್ಯವನ್ನು ನಿರ್ಧರಿಸುತ್ತದೆ.

SCROLL FOR NEXT