ದೇಶ

6 ಇಂಚಿನ ಪೈಪ್ ಮೂಲಕ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವವರಿಗೆ ಆಹಾರ, ಆಮ್ಲಜನಕ ಪೂರೈಕೆ ಯಶಸ್ವಿ!

Srinivas Rao BV

ಉತ್ತರಕಾಶಿ: ಉತ್ತರಕಾಶಿಯಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವವರಿಗೆ 6 ಇಂಚಿನ ಪೈಪ್ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಆಹಾರ, ಆಮ್ಲಜನಕ ಪೂರೈಕೆ ಮಾಡುವುದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಈ ಪೈಪ್ ನ ಮೂಲಕ, 8 ದಿನಗಳಿಂದ ಸುರಂಗದ ಒಳಗೆ ಸಿಲುಕಿರುವ 41 ಕಾರ್ಮಿಕರ ದೃಶ್ಯಗಳನ್ನು ಪಡೆಯುವುದಕ್ಕೂ ಸಾಧ್ಯವಾಗಲಿದೆ. 

ಇದಕ್ಕೂ ಮುನ್ನ ಸುರಂಗದ ಮೇಲ್ಭಾಗದಲ್ಲಿದ್ದ 4 ಇಂಚಿನ ಟ್ಯೂಬ್ ಮೂಲಕ ಆಮ್ಲಜನಕ ಹಾಗೂ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿತ್ತು. ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ನಿರ್ದೇಶಕ ಅಂಶು ಮನೀಶ್ ಖಲ್ಖೋ ಸ್ಥಳಕ್ಕೆ ಭೇಟಿ ನೀಡಿದ್ದು, ಇತ್ತೀಚಿನ ಬೆಳವಣಿಗೆಯನ್ನು ರಕ್ಷಣಾ ಕಾರ್ಯಾಚರಣೆಯೆಡೆಗೆ ಮೊದಲ ಪ್ರಗತಿ ಎಂದು ಹೇಳಿದ್ದಾರೆ.

"ನಾವು 53 ಮೀಟರ್ ಪೈಪ್ ನ್ನು ಅವಶೇಷಗಳ ಇನ್ನೊಂದು ಬದಿಗೆ ಕಳುಹಿಸಿದ್ದೇವೆ ಮತ್ತು ಸಿಲುಕಿರುವ ಕಾರ್ಮಿಕರು ನಮ್ಮ ಧ್ವನಿ ಕೇಳುವುದಕ್ಕೆ ಸಾಧ್ಯವಾಗುತ್ತದೆ" ಎಂದು ಅವರು ಹೇಳಿದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ದ ಡ್ರೋನ್‌ಗಳು ಮತ್ತು ರೋಬೋಟ್‌ಗಳನ್ನು ಸಹ ಸ್ಥಳಕ್ಕೆ ತರಲಾಗಿದ್ದು, ಸಿಲುಕಿರುವ ವ್ಯಕ್ತಿಗಳು ಅಲ್ಲಿಂದ ಹೊರಬರುವುದಕ್ಕೆ ಬೇರೆ ಮಾರ್ಗಗಳ ಸಾಧ್ಯತೆಯನ್ನು ಪರಿಶೀಲಿಸಲಾಗಿದೆ. 

SCROLL FOR NEXT