ದೇಶ

ವಿಶಾಖಪಟ್ಟಣಂ: ಜಟ್ಟಿ ಪ್ರದೇಶದಲ್ಲಿ ಬೆಂಕಿ, 35 ದೋಣಿಗಳು ಸುಟ್ಟು ಕರಕಲು!

Nagaraja AB

ವಿಶಾಖಪಟ್ಟಣಂ: ಇಲ್ಲಿನ ಜಟ್ಟಿ ಪ್ರದೇಶವೊಂದರಲ್ಲಿ ಸೋಮವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 35 ಮೀನುಗಾರಿಕಾ ದೋಣಿಗಳು ಸುಟ್ಟು ಕರಕಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.  ಅಲ್ಲಿ ಮೀನುಗಾರಿಕಾ ದೋಣಿಗಳು ಲಂಗರು ಹಾಕಿದ್ದವು ಎನ್ನಲಾಗಿದೆ. ಸ್ಥಳದಲ್ಲಿದ್ದ 8 ಎಲ್‌ಪಿಜಿ ಸಿಲಿಂಡರ್‌ಗಳಿಂದ ಸ್ಫೋಟ ಸಂಭವಿಸಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.

ಬೆಂಕಿಯ ಬಗ್ಗೆ ಮಾಹಿತಿ ಪಡೆದ ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು,  ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮೂರು ಗಂಟೆಗಳ ಹೋರಾಟದ ನಂತರ ಬೆಂಕಿಯನ್ನು ನಂದಿಸಿದ್ದಾರೆ ಎಂದು ವಿಶಾಖಪಟ್ಟಣ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಸ್ ರೇಣುಕಯ್ಯ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

"ಕೆಲವು ಹುಡುಗರು ತಡರಾತ್ರಿ ಅಲ್ಲಿ  ಪಾರ್ಟಿ ಮಾಡುತ್ತಿದ್ದ ವೇಳೆ ಒಂದು ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದೆ, ಅದೃಷ್ಟವಶಾತ್ ಇತರ ಬೋಟ್‌ಗಳು ಬಂದು ಆ ಹಡಗನ್ನು ಸಮುದ್ರಕ್ಕೆ ಬಿಟ್ಟಿದ್ದಾರೆ.  ಹಡಗಿನಲ್ಲಿ ಸಂಪೂರ್ಣ ಟ್ಯಾಂಕರ್ ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್‌ಗಳು ಇದ್ದವು. ಆದ್ದರಿಂದ ಬೆಂಕಿಯ ಜ್ವಾಲೆಯು ಜೆಟ್ಟಿಯಲ್ಲಿ ನಿಲ್ಲಿಸಲಾಗಿದ್ದ ಇತರ ಹಡಗುಗಳಿಗೆ ವ್ಯಾಪಿಸಿದೆ ಎಂದು ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ ರವಿಶಂಕರ್ ತಿಳಿಸಿದ್ದಾರೆ. 

ಐದು ಗಂಟೆ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ ಬಂದಿದೆ. ಬೆಂಕಿ ಅವಘಡದಿಂದ ಹಲವು ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಬೆಂಕಿ ಆವಘಡ ಕುರಿತು ವಿವರವಾದ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದುವರೆಗೆ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT