ದೇಶ

ತೆಲಂಗಾಣದಲ್ಲಿ 'ಮುಸ್ಲಿಂ ಮೀಸಲಾತಿ ಅಸಂವಿಧಾನಿಕ': ಸಿಎಂ ಯೋಗಿ ಆದಿತ್ಯನಾಥ್

Nagaraja AB

ಕುಮುರಂ ಭೀಮ್ ಆಸಿಫಾಬಾದ್: ತೆಲಂಗಾಣದಲ್ಲಿ ಮುಸ್ಲಿಂರಿಗೆ ನೀಡಿರುವ ಮೀಸಲಾತಿ ಡಾ. ಬಿ. ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಗುಡುಗಿದ್ದಾರೆ.

ಕುಮುರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಮರಿಗೆ ಮೀಸಲಾತಿ ನೀಡುವುದು ಅಸಂವಿಧಾನಿಕ ಅದನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಲು ಬಿಡಬಾರದು. ಬಿಆರ್‌ಎಸ್ ಮತ್ತು ಕಾಂಗ್ರೆಸ್ ಎರಡೂ ದೇಶವನ್ನು ಹೊಸ ವಿಭಜನೆಯತ್ತ ಕೊಂಡೊಯ್ಯಲು ಬಯಸುತ್ತಿವೆ ಎಂದು ಅವರು ಆರೋಪಿಸಿದರು. 

ತೆಲಂಗಾಣದಲ್ಲಿ ಈಗ ತುಷ್ಟೀಕರಣ ರಾಜಕಾರಣದ ಕೊಳಕು ಆಟ ಕಂಡು ಬರುತ್ತಿದೆ. ಬಿಆರ್‌ಎಸ್ ಸರ್ಕಾರ ಮುಸ್ಲಿಂ ಮೀಸಲಾತಿ ಘೋಷಿಸಿದಾಗ ಸಮಾಜವನ್ನು ಒಡೆಯಲು ಸರ್ಕಾರ ಯಾವ ಮಟ್ಟಕ್ಕೆ ಹೋಗಬಹುದು ಎಂಬುದನ್ನು ನಾವು ತೆಲಂಗಾಣದಲ್ಲಿ ನೋಡಿದ್ದೇವೆ. ‘ಮುಸ್ಲಿಂ ಮೀಸಲಾತಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಹಕ್ಕುಗಳನ್ನು ಕಸಿದುಕೊಳ್ಳುವ ಷಡ್ಯಂತ್ರದ ಭಾಗವಾಗಿದೆ, ಇದು ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಅವರು ಹೇಳಿದರು.

ಬಿಜೆಪಿಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದ ಅವರು, ಕೇಸರಿ ಪಕ್ಷ ಆಯ್ಕೆಯಾದರೆ, "ಅಸಂವಿಧಾನಿಕ" ಧರ್ಮ ಆಧಾರಿತ ಮೀಸಲಾತಿಯನ್ನು ರದ್ದುಪಡಿಸುತ್ತದೆ. ಅಲ್ಲದೇ ಒಬಿಸಿಗಳು, ಎಸ್‌ಸಿ ಮತ್ತು ಎಸ್‌ಟಿಗಳಿಗೆ ಪ್ರಯೋಜನ ನೀಡುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ವಾಗ್ದಾಳಿ ನಡೆಸಿದ ಆದಿತ್ಯನಾಥ್, ರಾಜ್ಯ ಸರ್ಕಾರ ಯುವ ಜನತೆ, ರೈತರು ಮತ್ತು ಮಹಿಳೆಯರಿಗೆ ಚುನಾವಣಾ ಭರವಸೆ ಈಡೇರಿಸದೆ ವಂಚಿಸಿದೆ ಎಂದು ಆರೋಪಿಸಿದರು.

SCROLL FOR NEXT