ದೇಶ

ಜಮ್ಮು ಮತ್ತು ಕಾಶ್ಮೀರ: ಲಷ್ಕರ್-ಎ-ತಯ್ಬಾ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ಮೂವರ ಬಂಧನ!

Ramyashree GN

ಬಾರಾಮುಲ್ಲಾ: ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಯ್ಬಾದ ಉಗ್ರರೊಂದಿಗೆ ನಂಟು ಹೊಂದಿದ್ದ ಮೂವರು ಸಹಚರರನ್ನು ಬಾರಾಮುಲ್ಲಾ ಜಿಲ್ಲೆಯಲ್ಲಿ ಬಂಧಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಬಂಧಿತರಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನವೆಂಬರ್ 25 ರಂದು 13 ಎಸ್‌‌ಐಕೆಎಚ್ಎಲ್ಐ, 185 ಬಿಎನ್ ಬಿಎಸ್ಎಫ್ ಮತ್ತು ಬಾರಾಮುಲ್ಲಾ ಪೋಲೀಸರು ನಡೆಸಿದ ಜಂಟಿ ನಾಕಾ ತಪಾಸಣೆ ಮತ್ತು ಗಸ್ತು ತಿರುಗುತ್ತಿದ್ದಾಗ, ಕಮಾಲ್‌ಕೋಟೆಯಿಂದ ಎನ್‌ಎಚ್‌ಡಬ್ಲ್ಯೂ ಕಡೆಗೆ ಬ್ಯಾಗ್‌ಗಳನ್ನು ಹೊತ್ತುಕೊಂಡು ಬರುತ್ತಿದ್ದ ಇಬ್ಬರು ಶಂಕಿತ ವ್ಯಕ್ತಿಗಳನ್ನು ಗುರುತಿಸಿದ್ದಾರೆ. ಅವರನ್ನು ಮಡಿಯನ ಕಮಾಲಕೋಟೆಯ ಖಾಂಡೆ ನಿವಾಸಿ ಅಜೀಂ ಖಂಡೆ ಅವರ ಪುತ್ರ ಜಮೀರ್ ಅಹ್ಮದ್ ಖಾಂಡೆ ಮತ್ತು ಮಡಿಯನ್ ಕಮಲಕೋಟೆ ನಿವಾಸಿ ಅಬ್ದುಲ್ ಮಜೀದ್ ಖಂಡೆ ಪುತ್ರ ಮೊಹಮ್ಮದ್ ನಸೀಮ್ ಖಂಡಯ್ಯ ಎಂದು ಗುರುತಿಸಲಾಗಿದೆ.

ಶೋಧದ ವೇಳೆ ಇವರಿಂದ ಮೂರು ಚೈನೀಸ್ ಗ್ರೆನೇಡ್ ಹಾಗೂ 2.5 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ, ಉರಿ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನಿರಂತರ ವಿಚಾರಣೆ ವೇಳೆ ಆರೋಪಿಗಳಿಬ್ಬರೂ ಅಕ್ರಮವಾಗಿ ಸಂಗ್ರಹಿಸಿದ್ದ ಗ್ರೆನೇಡ್‌ಗಳು ಮತ್ತು ನಗದನ್ನು ಮಡಿಯನ್ ಕಮಲಕೋಟೆ ನಿವಾಸಿ ಕರಮ್ ದಿನ್ ಭಟ್ಟಿ ಎಂಬುವವರ ಪುತ್ರ ಮಂಜೂರ್ ಅಹ್ಮದ್ ಭಟ್ಟಿ ಎಂಬುವವರು ತಮಗೆ ಯಾವುದೇ ಭಯೋತ್ಪಾದಕ ಕೃತ್ಯ ಎಸಗಲು ಒದಗಿಸಿದ್ದರು ಎಂದು ಬಹಿರಂಗಪಡಿಸಿದ್ದಾರೆ.

ಮಂಜೂರ್ ಅಹ್ಮದ್ ಭಟ್ಟಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ವಿಚಾರಣೆ ವೇಳೆ ಕೆಲ ವ್ಯಕ್ತಿಗಳಿಗೆ ಅಕ್ರಮವಾಗಿ ಗ್ರೆನೇಡ್ ಹಾಗೂ ಹಣವನ್ನು ಸರಬರಾಜು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದಲ್ಲದೆ, ಆತ ತಮ್ಮ ಮನೆಯ ಸಮೀಪವಿರುವ ಸ್ಥಳದಲ್ಲಿ ಒಂದು ಹ್ಯಾಂಡ್ ಗ್ರೆನೇಡ್ ಮತ್ತು ಸ್ವಲ್ಪ ಹಣವನ್ನು ಬಚ್ಚಿಟ್ಟಿರುವುದಾಗಿ ತಿಳಿಸಿದ್ದಾನೆ.

ಬಳಿಕ, ಒಂದು ಚೈನೀಸ್ ಹ್ಯಾಂಡ್ ಗ್ರೆನೇಡ್ ಮತ್ತು 2.17 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಆತನನ್ನೂ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. 

SCROLL FOR NEXT