ದೇಶ

ರಾಜ್ಯದಲ್ಲಿ ಬದಲಾವಣೆ ತರುವಂತೆ ತೆಲಂಗಾಣ ಮತದಾರರಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮನವಿ

Ramyashree GN

ನವದೆಹಲಿ: ನವೆಂಬರ್ 30 ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಮಂಗಳವಾರ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಬದಲಾವಣೆಯನ್ನು ತರಲು ರಾಜ್ಯದ ಮತದಾರರಿಗೆ ಮನವಿ ಮಾಡಿದರು.

ಡಿಸೆಂಬರ್ 3ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಎರಡು ನಿಮಿಷಗಳ ವಿಡಿಯೋ ಸಂದೇಶದಲ್ಲಿ, 'ನಮಸ್ಕಾರಂ, ತೆಲಂಗಾಣದ ನನ್ನ ಪ್ರೀತಿಯ ಸಹೋದರಿಯರು ಮತ್ತು ಸಹೋದರರೇ, ನಾನು ನಿಮ್ಮೆಲ್ಲರ ನಡುವೆ ಬರಲು ಸಾಧ್ಯವಾಗಲಿಲ್ಲ ಆದರೆ ನಾನು ನಿಮ್ಮ ಹೃದಯಕ್ಕೆ ತುಂಬಾ ಹತ್ತಿರದಲ್ಲಿದ್ದೇನೆ. ಇಂದು ನಾನು ನಿಮಗೆ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ನಾನು ತೆಲಂಗಾಣದ ಹುತಾತ್ಮ ಪುತ್ರರ ತಾಯಿಯರ ಕನಸನ್ನು ನನಸಾಗಿಸಲು ಬಯಸುತ್ತೇನೆ' ಎಂದಿದ್ದಾರೆ.

'ನಾವೆಲ್ಲರೂ 'ದೊರಲ' ತೆಲಂಗಾಣವನ್ನು 'ಪ್ರಜಲ' ತೆಲಂಗಾಣವನ್ನಾಗಿ (ದೊರೆಗಳ ತೆಲಂಗಾಣದಿಂದ ಪ್ರಜೆಗಳ  ತೆಲಂಗಾಣವನ್ನಾಗಿ) ಪರಿವರ್ತಿಸಬೇಕೆಂದು ನಾನು ಪ್ರಾಮಾಣಿಕವಾಗಿ ಬಯಸುತ್ತೇನೆ. ನಿಮ್ಮ ಕನಸುಗಳನ್ನು ನನಸು ಮಾಡಲು ಮತ್ತು ನಿಮಗೆ ನಿಜವಾದ ಮತ್ತು ಪ್ರಾಮಾಣಿಕ ಸರ್ಕಾರವನ್ನು ನೀಡಲು ಅವಕಾಶ ನೀಡಿ' ಎಂದು ಅವರು ಹೇಳಿದರು.
ಬಿಆರ್‌ಎಸ್ ಅಧಿಕಾರದಲ್ಲಿರುವ ದಕ್ಷಿಣ ರಾಜ್ಯದಲ್ಲಿ ಪ್ರಚಾರದ ಕೊನೆಯ ದಿನದಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರು ಮತ ಯಾಚನೆ ಮಾಡಿದ್ದಾರೆ.

'ಸೋನಿಯಾ ಅಮ್ಮಾ ಎಂದು ಕರೆಯುವ ಮೂಲಕ ನೀವು ನನಗೆ ಅಪಾರ ಗೌರವವನ್ನು ನೀಡಿದ್ದೀರಿ. ನೀವು ನನ್ನನ್ನು ತಾಯಿಯಂತೆ ನೋಡಿದ್ದೀರಿ. ಈ ಪ್ರೀತಿ ಮತ್ತು ಗೌರವಕ್ಕೆ ನಾನು ನಿಮಗೆ ಯಾವಾಗಲೂ ಕೃತಜ್ಞಳಾಗಿರುತ್ತೇನೆ ಮತ್ತು ಎಂದೆಂದಿಗೂ ನಿಮಗೆ ಸಮರ್ಪಿತವಾಗಿರುತ್ತೇನೆ' ಎಂದು ಅವರು ಹೇಳಿದರು.

'ತೆಲಂಗಾಣದ ನಮ್ಮ ಸಹೋದರಿಯರು, ತಾಯಂದಿರು, ಪುತ್ರರು, ಪುತ್ರಿಯರು ಮತ್ತು ಸಹೋದರರು ಈ ಬಾರಿ ಬದಲಾವಣೆಯನ್ನು ತರಲು ತಮ್ಮೆಲ್ಲಾ ಶಕ್ತಿಯನ್ನು ಬಳಸಬೇಕೆಂದು ನಾನು ವಿನಂತಿಸುತ್ತೇನೆ. ಕಾಂಗ್ರೆಸ್‌ಗೆ ಮತ ನೀಡಿ. 'ಮರ್ಪು ಕಾವಾಲಿ - ಕಾಂಗ್ರೆಸ್ ರಾವಾಲಿ' ಎಂದು ಸೋನಿಯಾ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ತೆಲಂಗಾಣದವರೇ ಆದ ‘ಸೋನಿಯಾ ಅಮ್ಮಾ’ ಅವರಿಂದ ರಾಜ್ಯದ ಜನತೆಗೆ ಸಂದೇಶ’ ಎಂದು ಸೋನಿಯಾ ಗಾಂಧಿ ಅವರ ವಿಡಿಯೋ ಸಂದೇಶವನ್ನು ರಾಹುಲ್ ಗಾಂಧಿ ಸಹ ಹಂಚಿಕೊಂಡಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಆಂಧ್ರ ಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯವನ್ನು ರಚಿಸಲಾಯಿತು ಮತ್ತು ಇದೀಗ ಅದರ ಕ್ರೆಡಿಟ್ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.

SCROLL FOR NEXT