ದೇಶ

ಗುಜರಾತ್‌: 'ಕಲುಷಿತ' ಆಯುರ್ವೇದಿಕ್ ಸಿರಪ್ ಸೇವಿಸಿ ಮೂವರು ಸಾವು

Lingaraj Badiger

ಅಹಮದಾಬಾದ್: ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಮಿಥೈಲ್ ಆಲ್ಕೋಹಾಲ್ ಹೊಂದಿರುವ ಕಲುಷಿತ ಆಯುರ್ವೇದಿಕ್ ಸಿರಪ್ ಸೇವಿಸಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಜರಾತ್‌ನ ಖೇಡಾ ಜಿಲ್ಲೆಯ ನಾಡಿಯಾಡ್ ಪಟ್ಟಣದ ಸಮೀಪವಿರುವ ಬಿಲೋದರ ಗ್ರಾಮದ ಅಂಗಡಿಯಲ್ಲಿ 'ಕಲ್ಮೇಘಸವ್ - ಅಸವ ಅರಿಷ್ಟ' ಎಂಬ ಆಯುರ್ವೇದಿಕ್ ಸಿರಪ್ ಅನ್ನು 55 ಜನರಿಗೆ ಮಾರಾಟ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ಸಿರಪ್ ನಲ್ಲಿ "ಈಥೈಲ್ ಆಲ್ಕೋಹಾಲ್ ಬದಲಿಗೆ ಮೀಥೈಲ್ ಆಲ್ಕೋಹಾಲ್ ಅನ್ನು ಬಳಸಲಾಗಿದೆ ಎಂದು ತೋರುತ್ತಿದೆ. ಮೀಥೈಲ್ ಕುರುಡುತನ ಮತ್ತು ಸಾವಿಗೆ ಕಾರಣವಾಗಬಹುದು. ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು" ಎಂದು ಗುಜರಾತ್ ಸರ್ಕಾರದ ವಕ್ತಾರ ಮತ್ತು ಕ್ಯಾಬಿನೆಟ್ ಸಚಿವ ರಿಷಿಕೇಶ್ ಪಟೇಲ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಇಂತಹ ಸಿರಪ್ ತಯಾರಿಸಲು ಸರ್ಕಾರ ಯಾರಿಗೂ ಅನುಮತಿ ನೀಡಿಲ್ಲ. ಒಬ್ಬರಿಗೆ ಅನುಮತಿ ಕೊಟ್ಟಿದ್ದನ್ನು ಸರ್ಕಾರ ರದ್ದು ಮಾಡಿದ ಕಾರಣ ಇದನ್ನು ಬೇರೆಡೆಯಿಂದ ತಂದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಪೊಲೀಸರು ಅದನ್ನು ಪರಿಶೀಲಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

SCROLL FOR NEXT