ದೇಶ

'ಬೆಂಗಳೂರು ಗುಲಾಬಿ ಈರುಳ್ಳಿ' ರಫ್ತಿಗೆ ಸುಂಕ ವಿನಾಯಿತಿ ನೀಡಿದ ಕೇಂದ್ರ ಸರ್ಕಾರ

Ramyashree GN

ನವದೆಹಲಿ: ‘ಬೆಂಗಳೂರು ಗುಲಾಬಿ ಈರುಳ್ಳಿ’ ರಫ್ತಿಗೆ ಕೆಲವು ಷರತ್ತುಗಳೊಂದಿಗೆ ಕೇಂದ್ರ ಸರ್ಕಾರವು ಇತ್ತೀಚೆಗಷ್ಟೇ ವಿಧಿಸಿದ್ದ ಸುಂಕದಿಂದ ವಿನಾಯಿತಿ ನೀಡಲಾಗಿದೆ.

ರಫ್ತು ಮಾಡಲು ಉದ್ದೇಶಿಸಿರುವ ಸರಕುಗಳಿಗೆ ರಫ್ತುದಾರರು ರಾಜ್ಯ ತೋಟಗಾರಿಕಾ ಇಲಾಖೆಯ ಆಯುಕ್ತರಿಂದ ಪ್ರಮಾಣಪತ್ರವನ್ನು ಪಡೆಯಬೇಕಿರುತ್ತದೆ. ಈ ಪ್ರಮಾಣಪತ್ರವು 'ಬೆಂಗಳೂರು ಗುಲಾಬಿ ಈರುಳ್ಳಿ' ರಫ್ತನ್ನು ದೃಢೀಕರಿಸುತ್ತದೆ. ಇಂತವರು ಈ ವಿನಾಯಿತಿಯ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕೃತ ಅಧಿಸೂಚನೆ ತಿಳಿಸಿದೆ.

ಈ ಅಧಿಸೂಚನೆಯು ತಕ್ಷಣದಿಂದಲೇ ಜಾರಿಗೆ ಬಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆಯನ್ನು ಸುಧಾರಿಸಲು ಮತ್ತು ಬೆಲೆ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆಗಸ್ಟ್‌ನಲ್ಲಿ ಈರುಳ್ಳಿ ರಫ್ತಿನ ಮೇಲೆ ಶೇ 40ರಷ್ಟು ಸುಂಕ ವಿಧಿಸಿತ್ತು.
'ಬೆಂಗಳೂರು ಗುಲಾಬಿ ಈರುಳ್ಳಿ' ಎಂಬುದು ಕರ್ನಾಟಕದ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಒಂದು ಬಗೆಯ ಈರುಳ್ಳಿಯಾಗಿದೆ. ಇದು 2015ರಲ್ಲಿ ಭೌಗೋಳಿಕ ಸೂಚಕ ಟ್ಯಾಗ್ ಅನ್ನು ಪಡೆದುಕೊಂಡಿದೆ.

ಅದೇ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರವು ತನ್ನ ಮೀಸಲು ಪೂರೈಕೆಯಿಂದ ಈರುಳ್ಳಿ ಬಿಡುಗಡೆ ಮಾಡಲು ಪ್ರಾರಂಭಿಸಿತು. 2023-24ರ ಋತುವಿನಲ್ಲಿ 3 ಲಕ್ಷ ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್ ಆಗಿಡಲು ಕೇಂದ್ರ ಸರ್ಕಾರ ಈ ಹಿಂದೆ ನಿರ್ಧರಿಸಿತ್ತು. 2022-23 ರಲ್ಲಿ ಸರ್ಕಾರವು 2.51 ಲಕ್ಷ ಟನ್ ಈರುಳ್ಳಿಯ ಬಫರ್ ಸ್ಟಾಕ್ ಅನ್ನು ಹೊಂದಿತ್ತು.

ಕಡಿಮೆ ಪೂರೈಕೆಯ ಋತುವಿನಲ್ಲಿ ದರಗಳು ಗಣನೀಯವಾಗಿ ಹೆಚ್ಚಾದರೆ, ಯಾವುದೇ ಅಗತ್ಯತೆಗಳನ್ನು ಪೂರೈಸಲು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲೆಂದು ಬಫರ್ ಸ್ಟಾಕ್ ಅನ್ನು ನಿರ್ವಹಿಸಲಾಗುತ್ತದೆ.

ಏಪ್ರಿಲ್-ಜೂನ್ ಅವಧಿಯಲ್ಲಿ ಕೊಯ್ಲು ಮಾಡಿದ ರಬಿ ಈರುಳ್ಳಿ ಭಾರತದ ಈರುಳ್ಳಿ ಉತ್ಪಾದನೆಯ 65 ಪ್ರತಿಶತವನ್ನು ಹೊಂದಿದೆ ಮತ್ತು ಇದು ಅಕ್ಟೋಬರ್-ನವೆಂಬರ್‌ನಲ್ಲಿ ಖಾರಿಫ್ ಬೆಳೆ ಕೊಯ್ಲು ಮಾಡುವವರೆಗೆ ಗ್ರಾಹಕರ ಬೇಡಿಕೆಯನ್ನು ಪೂರೈಸುತ್ತದೆ.

SCROLL FOR NEXT