ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಹದಿಹರೆಯದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ಇದನ್ನು ನಾಳೆ ನೆಲಸಮ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಉಜ್ಜಯಿನಿಯ 15 ವರ್ಷದ ಬಾಲಕಿಯೊಬ್ಬಳು, ಅರೆಬೆತ್ತಲೆಯಾಗಿ ಮತ್ತು ರಕ್ತಸ್ರಾವದಿಂದ ಸಹಾಯಕ್ಕಾಗಿ ಮನೆ-ಮನೆಗೆ ತೆರಳಿ ನೆರವುಯಾಚಿಸಿದರೂ ಯಾರೂ ನೆರವಿಗೆ ಬಾರಲಿಲ್ಲ. ಸಮೀಪದ ಆಶ್ರಮದ ಸಿಬ್ಬಂದಿಯೊಬ್ಬರು ಮಗುವಿನ ಧಾರುಣ ಸ್ಥಿತಿಕಂಡು ತಾವು ಧರಿಸಿದ್ದ ಟವಲ್ ನಿಂದ ಆಕೆಯನ್ನು ಮುಚ್ಚಿಕೊಂಡು ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಇದನ್ನೂ ಓದಿ: ಅದು ನನ್ನ ಮಗುವೇ ಆಗಿದ್ದರೆ..!; ನನ್ನ ಮಗನನ್ನು ಗಲ್ಲಿಗೇರಿಸಿ: ಉಜ್ಜಯಿನಿ ಅತ್ಯಾಚಾರ ಆರೋಪಿ ತಂದೆಯ ನೋವಿನ ನುಡಿ
ಈ ಕುರಿತ ಸಿಸಿಟಿವಿ ವೀಡಿಯೊಗಳು ಕಳೆದ ವಾರ ದೇಶಾದ್ಯಂತ ಪಸರಿಸಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಆರೋಪಿ ಭರತ್ ಸೋನಿ ಎಂಬ ಆಟೋ ರಿಕ್ಷಾ ಚಾಲಕನನ್ನು ಗುರುವಾರ ಬಂಧಿಸಲಾಗಿದೆ. ಸದ್ಯ ಭರತ್ ಜೈಲಿನಲ್ಲಿದ್ದು ವಿಚಾರಣೆಗಾಗಿ ಕಾಯುತ್ತಿದ್ದಾರೆ.
ಸುಮಾರು 700 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ ಸುದೀರ್ಘ ತನಿಖೆಯ ನಂತರ ಭರತ್ ಸಿಕ್ಕಿಬಿದ್ದಿದ್ದಾನೆ. ತನಿಖೆಯಲ್ಲಿ 30-35 ಜನರು ಭಾಗಿಯಾಗಿದ್ದರು. ಮೂರ್ನಾಲ್ಕು ದಿನ ಯಾರೂ ನಿದ್ದೆ ಮಾಡಿಲ್ಲ" ಎಂದು ಹಿರಿಯ ಪೊಲೀಸ್ ಅಧಿಕಾರಿ ಅಜಯ್ ವರ್ಮಾ ತಿಳಿಸಿದ್ದಾರೆ.
ಆರೋಪಿ ಮನೆ ಕೆಡವಲು ಸರ್ಕಾರ ನಿರ್ಧಾರ
ಇತ್ತ ಆರೋಪಿಯ ಕುಟುಂಬವು ಸರ್ಕಾರಿ ಭೂಮಿಯಲ್ಲಿರುವ ಮನೆಯಲ್ಲಿ ವರ್ಷಗಳಿಂದ ವಾಸಿಸುತ್ತಿದೆ ಎಂದು ಉಜ್ಜಯಿನಿ ಮಹಾನಗರ ಪಾಲಿಕೆ ತಿಳಿಸಿದ್ದು, ನಾಳೆ ಈ ಮನೆ ಕೆಡವಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪಾಲಿಕೆ ಆಯುಕ್ತ ರೋಷನ್ ಸಿಂಗ್, 'ಈ ಜಮೀನು ಸರ್ಕಾರಕ್ಕೆ ಸೇರಿದ್ದು, ಆದ್ದರಿಂದ ಅದನ್ನು ಕೆಡವಲು ಯಾವುದೇ ಸೂಚನೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಮಧ್ಯಪ್ರದೇಶ ಪೊಲೀಸರ ಸಹಯೋಗದಲ್ಲಿ ಮುನ್ಸಿಪಲ್ ದೇಹವು ನಾಳೆ ಕ್ರಮ ಕೈಗೊಳ್ಳಲಿದೆ.