ದೇಶ

ಅಭಿಷೇಕ್ ಬ್ಯಾನರ್ಜಿ, ಪತ್ನಿ ರುಜಿರಾಗೆ ಇಡಿ ಸಮನ್ಸ್; ಅಕ್ಟೋಬರ್ 9 ರಂದು ವಿಚಾರಣೆಗೆ ಬರುವಂತೆ ಸೂಚನೆ

Lingaraj Badiger

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಅವರಿಗೆ ಅಕ್ಟೋಬರ್ 9 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಬುಧವಾರ ಸಮನ್ಸ್ ಜಾರಿ ಮಾಡಿದೆ.

ಕೇಂದ್ರ ತನಿಖಾ ಸಂಸ್ಥೆಯು ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾ ಅವರಿಗೂ ಸಮನ್ಸ್ ಜಾರಿ ಮಾಡಿದ್ದು, ಅವರಿಗೆ ಕ್ಟೋಬರ್ 11 ರಂದು ವಿಚಾರಣೆಗೆ ಕರೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ನಮ್ಮ ಅಧಿಕಾರಿಗಳು ಅಕ್ಟೋಬರ್ 9 ರಂದು ಬ್ಯಾನರ್ಜಿ ಮತ್ತು ಅಕ್ಟೋಬರ್ 11 ರಂದು ಅವರ ಪತ್ನಿಯನ್ನು ವಿಚಾರಣೆ ನಡೆಸಲಿದ್ದಾರೆ. ಇಬ್ಬರಿಗೂ ಇಲ್ಲಿನ ಸಿಜಿಒ ಕಾಂಪ್ಲೆಕ್ಸ್‌ನಲ್ಲಿರುವ ನಮ್ಮ ಕಚೇರಿಗೆ ಬರುವಂತೆ ಸೂಚಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಇದೇ ಪ್ರಕರಣ ಸಂಬಂಧ ಈ ವಾರ ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಇಡಿ, ಟಿಎಂಸಿ ನಾಯಕನ ಪೋಷಕರಾದ ಅಮಿತ್ ಮತ್ತು ಲತಾ ಬ್ಯಾನರ್ಜಿಗೆ ಸಮನ್ಸ್ ನೀಡಿತ್ತು.

"ನಮ್ಮ ಪ್ರತಿಭಟನೆಯ ಕಾರ್ಯಕ್ರಮಕ್ಕೂ ಮುನ್ನ ಅಭಿಷೇಕ್ ಬ್ಯಾನರ್ಜಿಗೆ ಸಮನ್ಸ್ ನೀಡಲಾಗಿತ್ತು. ಅದನ್ನು ಪ್ರತಿಭಟನೆ ತಡೆಯಲು ಮಾಡಿದ ಎಲ್ಲಾ ತಂತ್ರಗಳು ವಿಫಲವಾದ ನಂತರ ಈಗ ಅವರು ಕೊಳಕು ತಂತ್ರಗಳನ್ನು ಮಾಡುತ್ತಿದ್ದಾರೆ. ಅಭಿಷೇಕ್ ಬ್ಯಾನರ್ಜಿಗೆ ನೋಟಿಸ್ ನೀಡಿರುವುದು ದ್ವೇಷದ ರಾಜಕೀಯಕ್ಕೆ ಉತ್ತಮ ಉದಾಹರಣೆ" ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.

SCROLL FOR NEXT