ದೇಶ

ಮಣಿಪುರ: ಸಚಿವ ಯುಮ್ನಮ್ ಖೇಮ್‌ಚಂದ್ ನಿವಾಸದಲ್ಲಿ ಗ್ರೆನೇಡ್ ಸ್ಫೋಟ, ಯೋಧನಿಗೆ ಗಾಯ

Ramyashree GN

ಗುವಾಹಟಿ: ಮಣಿಪುರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಯುಮ್ನಮ್ ಖೇಮ್‌ಚಂದ್ ಅವರ ಇಂಫಾಲ್‌ನ ಯುಮ್ನಾಮ್ ಲೈಕೈಯಲ್ಲಿರುವ ನಿವಾಸದಲ್ಲಿ ದುಷ್ಕರ್ಮಿಗಳು ಶನಿವಾರ ರಾತ್ರಿ ಗ್ರೆನೇಡ್ ಸ್ಫೋಟಿಸಿದ್ದಾರೆ.

ಘಟನೆಯಲ್ಲಿ ಸಚಿವರು ಮತ್ತು ಅವರ ಕುಟುಂಬ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದು, ಮನೆಯ ಕಾವಲು ಕಾಯುತ್ತಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಗಾಯಗೊಂಡಿದ್ದಾರೆ.

ಸ್ಫೋಟದ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಘಟನೆ ಬಳಿಕ ಆ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಮ್ಮ ನಿವಾಸದ ಗೇಟ್ ಬಳಿ ಗ್ರೆನೇಡ್ ಸ್ಫೋಟಗೊಂಡಾಗ ಕುಟುಂಬ ಸದಸ್ಯರೊಂದಿಗೆ ತಾವು ಮನೆಯಲ್ಲಿದ್ದೆ. ಯೋಧನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಖೇಮಚಂದ್ ಭಾನುವಾರ ತಿಳಿಸಿದ್ದಾರೆ. 

ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಸ್ಫೋಟದ ನಂತರ ಸಚಿವರ ನಿವಾಸಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

'ಘಟನೆ ಬಗ್ಗೆ ಮುಖ್ಯಮಂತ್ರಿಗಳು ಕಳವಳ ವ್ಯಕ್ತಪಡಿಸಿದರು. ಕೃತ್ಯವನ್ನು ಯಾರು ಎಸಗಿರಬಹುದು ಎಂದು ಕೇಳಿದರು. ನಾನು ಯಾರೊಂದಿಗೂ ದ್ವೇಷ ಹೊಂದಿಲ್ಲದ ಕಾರಣ ನನಗೆ ಗೊತ್ತಿಲ್ಲ ಎಂದು ಹೇಳಿದ್ದೇನೆ ಎಂದು ಖೇಮ್‌ಚಂದ್ ಹೇಳಿದರು.

ಈ ಹಿಂದೆ, ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾದ ವೇಳೆ ಮಣಿಪುರದ ಹಲವಾರು ಶಾಸಕರ ಮನೆಗಳ ಮೇಲೆ ಗುಂಪುಗಳ ದಾಳಿ ನಡೆದಿತ್ತು.

SCROLL FOR NEXT