ದೇಶ

ಜಾತಿ ಗಣತಿಗೆ ಬೆಂಬಲ; ಸಿಡಬ್ಲ್ಯುಸಿನ ಐತಿಹಾಸಿಕ ನಿರ್ಧಾರ ಬಡವರ ಅಭಿವೃದ್ಧಿಗೆ 'ಶಕ್ತಿಯುತ ಹೆಜ್ಜೆ': ರಾಹುಲ್ ಗಾಂಧಿ

Ramyashree GN

ನವದೆಹಲಿ: ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸುವ ಕಲ್ಪನೆಯನ್ನು ಬೆಂಬಲಿಸಲು ಪಕ್ಷದ ಕಾರ್ಯಕಾರಿ ಸಮಿತಿಯು ಸರ್ವಾನುಮತದಿಂದ 'ಐತಿಹಾಸಿಕ ನಿರ್ಧಾರ' ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. ಇದು ಬಡವರ ಅಭಿವೃದ್ಧಿಗೆ 'ಶಕ್ತಿಯುತ ಹೆಜ್ಜೆ' ಎಂದೂ ಅವರು ಪ್ರತಿಪಾದಿಸಿದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಹುಪಾಲು ಇಂಡಿಯಾ ಮೈತ್ರಿಕೂಟದ ಪಕ್ಷಗಳು ಜಾತಿ ಗಣತಿಯನ್ನು ಬೆಂಬಲಿಸುತ್ತವೆ ಮತ್ತು ಒತ್ತಾಯಿಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಂದು ವೇಳೆ ಇಂಡಿಯಾ ಮೈತ್ರಿಕೂಟದಲ್ಲಿನ ಯಾವುದೇ ಪಕ್ಷವು ಈ ಬಗ್ಗೆ ಬಿನ್ನಾಭಿಪ್ರಾಯವನ್ನು ಹೊಂದಿದ್ದರೆ, ಕಾಂಗ್ರೆಸ್ ಹೊಂದಿಕೊಳ್ಳುತ್ತದೆ. 'ಫ್ಯಾಸಿಸ್ಟ್ ಅಲ್ಲ' ಎಂದು ಅವರು ಹೇಳಿದರು.

ನಾಲ್ಕು ರಾಜ್ಯಗಳ ಪಕ್ಷದ ಮುಖ್ಯಮಂತ್ರಿಗಳಿಂದ ಸುತ್ತುವರಿದಿದ್ದ ರಾಹುಲ್, ಜಾತಿ ಗಣತಿಯನ್ನು ಬೆಂಬಲಿಸುವ ಸಿಡಬ್ಲ್ಯುಸಿಯ ನಿರ್ಧಾರವು ಬಡ ಜನರ ಅಭಿವೃದ್ಧಿಗೆ 'ಅತ್ಯಂತ ಪ್ರಗತಿಪರ' ಮತ್ತು 'ಶಕ್ತಿಯುತ' ಹೆಜ್ಜೆಯಾಗಿದೆ ಎಂದು ಹೇಳಿದರು.

ದೇಶದಲ್ಲಿ ಹೊಸ ಮಾದರಿ ಮತ್ತು ಅಭಿವೃದ್ಧಿಗೆ ಈ 'ಎಕ್ಸ್-ರೇ' ಅಗತ್ಯವಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಸಮನ್ವಯ, ಶಿಸ್ತು ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಸಿಡಬ್ಲ್ಯುಸಿ ಸಭೆಯಲ್ಲಿ ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ ನ್ಯಾಯ ಮತ್ತು ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ನಡೆಸಬೇಕು ಎಂಬ ಬೇಡಿಕೆಯನ್ನು ಮತ್ತೊಮ್ಮೆ ಪ್ರಸ್ತಾಪಿಸಿದರು. ಈ ವಿಷಯದಲ್ಲಿ ಬಿಜೆಪಿ ಮೌನವಾಗಿದೆ ಎಂದರು.

ಕಲ್ಯಾಣ ಯೋಜನೆಗಳಲ್ಲಿ ಸರಿಯಾದ ಪಾಲು ಪಡೆಯಲು, ಸಮಾಜದ ದುರ್ಬಲ ವರ್ಗಗಳ ಸ್ಥಿತಿಯ ಕುರಿತು ಸಾಮಾಜಿಕ-ಆರ್ಥಿಕ ದತ್ತಾಂಶವನ್ನು ಹೊಂದಿರುವುದು ಮತ್ತು ಅವರಿಗೆ ಸಾಮಾಜಿಕ ನ್ಯಾಯವನ್ನು ಖಚಿತಪಡಿಸುವುದು ಮುಖ್ಯವಾಗಿದೆ ಎಂದು ಖರ್ಗೆ ಪ್ರತಿಪಾದಿಸಿದರು.

SCROLL FOR NEXT