ದೇಶ

ಗಂಗಾಜಲಕ್ಕೆ ಶೇ. 18 ರಷ್ಟು ಜಿಎಸ್‌ಟಿ ವಿಧಿಸುತ್ತಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

Lingaraj Badiger

ನವದೆಹಲಿ: ಗಂಗಾಜಲದ ಮೇಲೂ ಶೇ. 18 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ(CBIC), ಸರ್ಕಾರ ಗಂಗಾಜಲದ ಮೇಲೆ ಜಿಎಸ್ ಟಿ ವಿಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

"ದೇಶದಾದ್ಯಂತ ಜನ ಪೂಜೆ ಮಾಡಲು ಗಂಗಾಜಲವನ್ನು ಬಳಸುತ್ತಾರೆ ಮತ್ತು ಪೂಜೆ ಸಾಮಗ್ರಿಗೆ ಜಿಎಸ್ ಟಿಯಿಂದ ವಿನಾಯಿತಿ ಇದೆ... ಜಿಎಸ್ ಟಿಯನ್ನು ಪರಿಚಯಿಸಿದಾಗಿನಿಂದ ಈ ಎಲ್ಲಾ ವಸ್ತುಗಳಿಗೆ ವಿನಾಯಿತಿ ನೀಡಲಾಗಿದೆ" ಎಂದು ಸಿಬಿಐಸಿ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.

ಮೇ 18-19, 2017 ಮತ್ತು ಜೂನ್ 3, 2017 ರಂದು ನಡೆದ ಜಿಎಸ್‌ಟಿ ಕೌನ್ಸಿಲ್‌ನ 14 ಮತ್ತು 15ನೇ ಸಭೆಗಳಲ್ಲಿ ಕ್ರಮವಾಗಿ 'ಪೂಜಾ ಸಾಮಗ್ರಿ' ಮೇಲಿನ ಜಿಎಸ್‌ಟಿ ಕುರಿತು ವಿವರವಾಗಿ ಚರ್ಚಿಸಲಾಗಿದೆ ಮತ್ತು ಅವುಗಳನ್ನು ವಿನಾಯಿತಿ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ ಎಂದು ಸಿಬಿಐಸಿ ಹೇಳಿದೆ.

ಇದಕ್ಕೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಕ್ಸ್ ಪೋಸ್ಟ್‌ನಲ್ಲಿ, ಕೇಂದ್ರ ಸರ್ಕಾರ ಗಂಗಾಜಲದ ಮೇಲೆ ಶೇಕಡಾ 18 ರಷ್ಟು ಜಿಎಸ್‌ಟಿ ವಿಧಿಸುತ್ತಿದೆ. ಇದು "ಲೂಟಿ ಮತ್ತು ಬೂಟಾಟಿಕೆಗಳ ಪರಮಾವಧಿ" ಎಂದು ಟೀಕಿಸಿದ್ದರು.

ಭಾರತೀಯರಿಗೆ ಗಂಗೆ ಪರಮಪವಿತ್ರ. ಭಾರತೀಯರ ಜೀವನದಲ್ಲಿ ಹುಟ್ಟಿನಿಂದ ಹಿಡಿದು ಸಾವಿನ ತನಕ ಗಂಗೆ ಅದರದ್ದೇ ಆದ ಪ್ರಾಮುಖ್ಯತೆ ಪಡೆದಿದೆ. ಅಂತಹ ಪರಮ ಪವಿತ್ರವಾದ ಗಂಗಾ ನದಿ ನೀರಿಗೆ ಶೇ. 18 ರಷ್ಟು ಜಿಎಸ್‌ಟಿ ವಿಧಿಸುತ್ತಿದ್ದೀರಿ. ಇದು ಸರಿಯೇ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಸಿಬಿಐಸಿ ಈ ಸ್ಪಷ್ಟನೆ ನೀಡಿದೆ.

SCROLL FOR NEXT