ನವದೆಹಲಿ: ಇಂದು ಜಗತ್ತು ಎದುರಿಸುತ್ತಿರುವ ಸಂಘರ್ಷ ಮತ್ತು ಯುದ್ಧಗಳಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ ಎಂದು ಎಚ್ಚರಿಸಿರುವ ಪ್ರಧಾನಿ ನರೇಂದ್ರ ಮೋದಿ, ಜಗತ್ತು ಮಾನವ ಕೇಂದ್ರಿತ ಧೋರಣೆಯೊಂದಿಗೆ ಮುನ್ನಡೆಯಬೇಕು ಎಂದು ಶುಕ್ರವಾರ ಹೇಳಿದ್ದಾರೆ.
ಇಲ್ಲಿ ಒಂಬತ್ತನೇ ಜಿ20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆಯ (ಪಿ20) ಉದ್ಘಾಟನಾ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ನಂಬಿಕೆಯ ಹಾದಿಯಲ್ಲಿನ ಅಡೆತಡೆಗಳನ್ನು ನಾವು ತೆಗೆದುಹಾಕಬೇಕಾಗಿದೆ ಎಂದು ಹೇಳಿದರು.
ಇದು ಶಾಂತಿ ಮತ್ತು ಭ್ರಾತೃತ್ವದ ಸಮಯ ಮತ್ತು ಒಟ್ಟಿಗೆ ಮುನ್ನಡೆಯುವ ಸಮಯ ಎಂದು ಮೋದಿ ಹೇಳಿದರು.
ವಾರಾಂತ್ಯದಲ್ಲಿ ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಪಟ್ಟಣಗಳ ಮೇಲೆ ನಡೆಸಿದ ಸರಣಿ ದಾಳಿಗಳ ಹಿನ್ನಲೆಯಲ್ಲಿ ಅವರ ಹೇಳಿಕೆಗಳು ಬಂದಿವೆ.
ಸುಮಾರು 20 ವರ್ಷಗಳ ಹಿಂದೆ ಭಾರತದ ಸಂಸತ್ ಭವನದ ಮೇಲಿನ ದಾಳಿಯನ್ನು ಉಲ್ಲೇಖಿಸಿದ ಪ್ರಧಾನಿ, ಭಾರತವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಇದು ಸಾವಿರಾರು ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಹೇಳಿದರು.
ಭಯೋತ್ಪಾದನೆ ಎಷ್ಟು ದೊಡ್ಡ ಸವಾಲು ಎಂಬುದನ್ನು ಜಗತ್ತು ಈಗ ಅರಿತುಕೊಳ್ಳುತ್ತಿದೆ. ಭಯೋತ್ಪಾದನೆ ಎಲ್ಲಿಯಾದರೂ, ಯಾವುದೇ ಅಭಿವ್ಯಕ್ತಿಯಲ್ಲಿದ್ದರೂ ಅದು ಮಾನವೀಯತೆಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.
'ನಾವು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಭಾವನೆಯಿಂದ ಜಗತ್ತನ್ನು ನೋಡಬೇಕು. ಜಾಗತಿಕ ಸವಾಲುಗಳನ್ನು ಎದುರಿಸಲು ಜನರ ಭಾಗವಹಿಸುವಿಕೆ ಅತ್ಯುತ್ತಮ ಮಾಧ್ಯಮವಾಗಿದೆ' ಎಂದು ಅವರು ಹೇಳಿದರು.
G20 ಅಧ್ಯಕ್ಷತೆಯು ವರ್ಷವಿಡೀ ಭಾರತದಲ್ಲಿ ಹಬ್ಬಗಳನ್ನು ಖಾತ್ರಿಪಡಿಸಿದೆ ಮತ್ತು ಈ ಆಚರಣೆಗೆ ಭಾರತವು ಚಂದ್ರನ ಮೇಲೆ ಇಳಿದಿರುವುದನ್ನು ಸೇರಿಸಿದೆ ಎಂದು ಪ್ರಧಾನಿ ಹೇಳಿದರು.