ದೇಶ

ಇಂದು ಮಹಾಲಯ ಅಮಾವಾಸ್ಯೆ: ಪಿತೃಪಕ್ಷದ ಕೊನೆಯ ದಿನ, ಹಿರಿಯರ ಸ್ಮರಣೆ!

Nagaraja AB

ನವದೆಹಲಿ: ಇಂದು ಮಹಾಲಯ ಅಮಾವಾಸ್ಯೆ, 14 ದಿನಗಳ ಪಿತೃ ಪಕ್ಷದ ಕೊನೆಯ ದಿನವಾಗಿದ್ದು, ನಾಳೆಯಿಂದ ನವರಾತ್ರಿ ಆರಂಭವಾಗಲಿದೆ. ಪ್ರತಿ ವರ್ಷ ಭಾದ್ರಪದಮಾಸದಲ್ಲಿ ಬರುವ ಕೃಷ್ಣಪಕ್ಷವನ್ನು ಪಿತೃಪಕ್ಷ ಎನ್ನುವರು. ಇದು ಪಿತೃಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವಪಿತೃ ಅಮಾವಾಸ್ಯೆಯೆಂದೂ ಕರೆಯಲಾಗುತ್ತದೆ.

ಅಗಲಿದ ಪಿತೃಗಳನ್ನು ನೇರವಾಗಿ ಸ್ಮರಿಸಲು ವರ್ಷದಲ್ಲೊಮ್ಮೆ ಪಿತೃಪಕ್ಷದಲ್ಲಿ ಅಥವಾ ಮಹಾಲಯ ಅಮಾವಾಸ್ಯೆಯನ್ನು ಆಚರಿಸುವುದು ರೂಢಿ. ಆ ದಿನ, ಅಗಲಿದವರನ್ನು ಸ್ಮರಿಸಿ, ತಿಲ ದರ್ಪಣವನ್ನು, ಜಲ ದರ್ಪಣವನ್ನು ಹಾಗೂ ಬಲಿಯನ್ನು, ಪಿಂಡವನ್ನು ನೀಡಿ ಸ್ಮರಿಸಲಾಗುತ್ತದೆ.

ಪ್ರಸಿದ್ಧ ಯಾತ್ರಾಸ್ಥಳಗಾದ ಉತ್ತರಾಖಂಡ್ ರಾಜ್ಯದ ಹರಿದ್ವಾರ, ಪಶ್ಚಿಮ ಬಂಗಾಳದ ಗಂಗಾಸಾಗರ ಸೇರಿದಂತೆ ದೇಶದ ಹಲವೆಡೆ ಬೆಳಗ್ಗೆಯಿಂದಲೇ ನದಿಯಲ್ಲಿ ಮುಳುಗಿ, ಜಲ ದರ್ಪಣ, ಪಿಂಡವನ್ನು ನೀಡಿ ಹಿರಿಯರನ್ನು ಸ್ಮರಿಸಲಾಗುತ್ತಿದೆ. ಹರಿದ್ವಾರದ ನಾರಾಯಣಿ ಶಿಲಾ ದೇವಾಲಯದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಮ್ಮ ಸನಾತನ ಧರ್ಮದ ಭಾಗವಾಗಿದ್ದು, ಮನಸ್ಸಿಗೆ ಶಾಂತಿ ನೀಡುತ್ತದೆ ಎಂದರು. 

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಗಂಗಾಸಾಗರದಲ್ಲಿ ಬೆಳಂ ಬೆಳಗ್ಗೆ ಆಗಮಿಸಿದ ಭಕ್ತರು ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. 

SCROLL FOR NEXT