ದೇಶ

ಆಸ್ತಿ ತೆರಿಗೆ ಪ್ರಕರಣದಲ್ಲಿ ಅನುಕೂಲಕರ ತೀರ್ಪಿಗೆ ಒತ್ತಾಯಿಸಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠಕ್ಕೆ ಬಾಂಬ್ ಬೆದರಿಕೆ

Ramyashree GN

ನಾಗ್ಪುರ: ಆಸ್ತಿ ತೆರಿಗೆ ಪ್ರಕರಣವೊಂದರಲ್ಲಿ ಪ್ರತಿಕೂಲ ತೀರ್ಪು ನೀಡಿದರೆ ಇಬ್ಬರು ನ್ಯಾಯಾಧೀಶರ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠಕ್ಕೆ ಬೆದರಿಕೆ ಪತ್ರ ಬಂದಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಈ ಬಗ್ಗೆ ನಾಗ್ಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್ 11 ರಂದು ನಾಗ್ಪುರ ಪೀಠಕ್ಕೆ ಪತ್ರ ಲಭ್ಯವಾಗಿದೆ ಮತ್ತು ಅಮರಾವತಿಯ ವರುದ್ ನಗರ ಪರಿಷತ್ತಿನ ಆಸ್ತಿ ತೆರಿಗೆ ಹೆಚ್ಚಳವನ್ನು ಪ್ರಶ್ನಿಸಿ ಪ್ರಭಾಕರ್ ಕಾಳೆ ಎಂಬುವವರು ಅರ್ಜಿ ಸಲ್ಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರತಿಕೂಲವಾದ ತೀರ್ಪು ನೀಡಿದರೆ ಇಬ್ಬರು ನ್ಯಾಯಾಧೀಶರ ಮೇಲೆ ಬಾಂಬ್ ದಾಳಿ ನಡೆಸಲಾಗುವುದು ಎಂದು ಅದು ಹೇಳಿದೆ. 

ಈ ಪತ್ರವನ್ನು ಕಾಳೆ ಅವರ ಹೆಸರಿನಲ್ಲಿ ಕಳುಹಿಸಲಾಗಿದ್ದು, ನ್ಯಾಯಾಲಯದ ಆಡಳಿತವು ತಕ್ಷಣವೇ ಪೊಲೀಸರಿಗೆ ಈ ವಿಷಯವನ್ನು ತಿಳಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಅಮರಾವತಿ ಗ್ರಾಮಾಂತರ ಪೊಲೀಸರು ಅರ್ಜಿದಾರರನ್ನು ವಿಚಾರಣೆಗೆ ಒಳಪಡಿಸಿದ್ದು, ಬೆದರಿಕೆ ಪತ್ರ ಬಂದಿರುವುದಕ್ಕೂ, ತನಗೂ ಯಾವುದೇ ಸಂಬಂಧವಿಲ್ಲ ಎಂದಿರುವುದಾಗಿ ಅವರು ಹೇಳಿದ್ದಾರೆ.

ಕಾಳೆ ಅವರ ವಕೀಲರು ಸಹ ಅವರ ಹೇಳಿಕೆಯನ್ನು ದೃಢಪಡಿಸಿದ್ದು, ಕಾಳೆ ಅವರ ಪ್ರತಿಷ್ಠೆಗೆ ಕಳಂಕ ತರುವ ಸಲುವಾಗಿ ಪತ್ರವನ್ನು ಕಳುಹಿಸಿರಬಹುದು ಎಂದು ಸೂಚಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪತ್ರದ ಮೂಲವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಮತ್ತು ನಿರ್ಣಾಯಕ ಸುಳಿವುಗಳಿಗಾಗಿ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದರು.

SCROLL FOR NEXT