ದೇಶ

ಅದಾನಿ ಗ್ರೂಪ್ ಜನರನ್ನು ಲೂಟಿ ಮಾಡುತ್ತಿದೆ; ವಿದ್ಯುತ್ ದುಬಾರಿ ಹಿಂದೆ ಇವರ ಕೈವಾಡ: ರಾಹುಲ್ ಗಾಂಧಿ ಆರೋಪ

Manjula VN

ನವದೆಹಲಿ: ಮತ್ತೊಮ್ಮೆ ಅದಾನಿ ವಿಚಾರ ಪ್ರಸ್ತಾಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ವಿದ್ಯುತ್ ದುಬಾರಿಯಾಗುತ್ತಿರುವ ಹಿಂದೆ ಅದಾನಿ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದಾನಿ ಅವರಿಂದಾಗಿಯೇ ವಿದ್ಯುತ್ ದುಬಾರಿಯಾಗುತ್ತಿದೆ. ವಿದ್ಯುತ್ ದರದಲ್ಲಿ ಜನರಿಗೆ 12,000 ಕೋಟಿ ರೂಪಾಯಿಗಳಷ್ಟು ವಂಚಿಸಿದೆ ಎಂದು ಹೇಳಿದ್ದಾರೆ.

ಅದಾನಿ ಜಿ ಇಂಡೋನೇಷ್ಯಾದಲ್ಲಿ ಕಲ್ಲಿದ್ದಲು ಖರೀದಿಸುತ್ತಾರೆ. ಭಾರತಕ್ಕೆ ಬರುವ ಹೊತ್ತಿಗೆ ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಅವರು ಕಲ್ಲಿದ್ದಲಿನ ಬೆಲೆಯನ್ನು ಅತಿಯಾಗಿ ಇನ್‌ವಾಯ್ಸ್ ಮಾಡಿದ್ದಾರೆ. ಇದು ದೇಶದಲ್ಲಿನ ವಿದ್ಯುತ್ ದರಗಳ ಮೇಲೆ ಪರಿಣಾಮ ಬೀರುತ್ತಿದೆ. ಜನರು ಹೆಚ್ಚಿನ ವಿದ್ಯುತ್ ದರಗಳನ್ನು ಪಾವತಿ ಮಾಡುವಂತಾಗಿದೆ. ಆದರೆ, ಅವರ ವಿರುದ್ಧ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಅದಾನಿಗೆ ಸರ್ಕಾರದ ಸಂಪೂರ್ಣ ರಕ್ಷಣೆ ಇದೆ. ಅವರ ಹಿಂದಿರುವುದು ಯಾವ ಶಕ್ತಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಈ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೌನವನ್ನು ರಾಹುಲ್ ಗಾಂಧಿಯವರು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿಯವರು ಈ ವಿಚಾರ ಕುರಿತು ತನಿಖೆ ನಡೆಸಬೇಕು. ಈ ಕುರಿತು ಸ್ಪಷ್ಟತಗಳನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.

ಈ ವಿಚಾರವಾಗಿ ಪ್ರಧಾನಿ ಮೋದಿಯವರು ಮೌನ ತಾಳಿರುವುದೇಕೆ? ತನಿಖೆಗೆ ಆದೇಶಿಸಿ, ವಿಶ್ವಾಸಾರ್ಹತೆ ಉಳಿಸಿಕೊಳ್ಳುವಂತೆ ಆಗ್ರಹಿಸಿ ನಾನು ಮೋದಿಯವರಿಗೆ ಸಹಾಯ ಮಾಡುತ್ತಿದ್ದೇನೆ ಎಂದು ಹೇಳಿದರು.

SCROLL FOR NEXT