ದೇಶ

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಮಾನನಷ್ಟ ಪ್ರಕರಣದಿಂದ ಹಿಂದೆ ಸರಿದ ವಕೀಲರು

Ramyashree GN

ನವದೆಹಲಿ: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಪರ ವಕೀಲರು ಶುಕ್ರವಾರ ದೆಹಲಿ ಹೈಕೋರ್ಟ್‌ನಲ್ಲಿ ಪ್ರಕರಣವನ್ನು ಪ್ರತಿನಿಧಿಸುವುದರಿಂದ ಹಿಂದೆ ಸರಿದಿದ್ದಾರೆ.

ವಿಚಾರಣೆಯ ವೇಳೆ ಖುದ್ದು ಹಾಜರಾದ ದೇಹದ್ರಾಯ್ ಅವರು, ಮೊಯಿತ್ರಾ ಅವರ ಪರ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಗುರುವಾರ ತಮಗೆ ದೂರವಾಣಿ ಕರೆ ಮಾಡಿ ಮೊಯಿತ್ರಾ ವಿರುದ್ಧ ಸಿಬಿಐಗೆ ನೀಡಿರುವ ದೂರನ್ನು ಹಿಂಪಡೆಯುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಿದರು. 

ಇದನ್ನು ಖಚಿತಪಡಿಸಿದ ಶಂಕರನಾರಾಯಣ್‌, ದೇಹದ್ರಾಯ್ ಅವರು ವಕೀಲರ ಸಂಘದ ಸದಸ್ಯರಾಗಿದ್ದಾರೆ ಮತ್ತು ಅವರು ಈ ಹಿಂದೆ ನನಗೆ ಪ್ರಕರಣವೊಂದರಲ್ಲಿ ನೆರವಾಗಿದ್ದರು. ಇದನ್ನು ನನ್ನ ಕಕ್ಷಿದಾರರಾದ ಮಹುವಾ ಅವರ ಗಮನಕ್ಕೂ ತಂದಿದ್ದೇನೆ. ಅವರೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇಬ್ಬರ ನಡುವಿನ ವಿವಾದದ ಇತ್ಯರ್ಥಕ್ಕಾಗಿ ತಾವು ಮಧ್ಯಸ್ಥಿಕೆ ವಹಿಸುವುದಾಗಿ ಹೈಕೋರ್ಟ್‌ಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸಚಿನ ದತ್ತಾ, ನೀವು ಮಧ್ಯಸ್ಥಿಕೆ ವಹಿಸುವುದಾದರೆ ಈ ಪ್ರಕರಣದಲ್ಲಿ ವಾದ ಮಂಡಿಸಲು ನಿಮಗೆ ಅರ್ಹತೆ ಇದೆಯೇ? ಈ ಪ್ರಶ್ನೆಗೆ ನಿಮ್ಮೊಳಗೆ ನೀವು ಉತ್ತರ ಕಂಡುಕೊಳ್ಳಬೇಕು ಎಂದು ವಕೀಲರನ್ನು ಪ್ರಕರಣದಿಂದ ಹಿಂದೆ ಸರಿಯುವಂತೆ ಸೂಚಿಸಿದರು. 

SCROLL FOR NEXT