ನವದೆಹಲಿ: ಸಂಸತ್ತಿನಲ್ಲಿ ಹಣ ಪಡೆದು ಪ್ರಶ್ನೆ ಕೇಳಿರುವ ಆರೋಪದ ಪ್ರಕರಣದಲ್ಲಿ ಅಕ್ಟೋಬರ್ 31ರ ಬದಲಿಗೆ ನವೆಂಬರ್ 2ರಂದು ಹಾಜರಾಗುವಂತೆ ಲೋಕಸಭೆಯ ನೈತಿಕ ಸಮಿತಿಯು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮಹುವಾ ಮೊಯಿತ್ರಾ ಅವರಿಗೆ ಸೂಚಿಸಿದೆ. ಇದರ ನಂತರ ಈ ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ.
ಇದಕ್ಕೂ ಮೊದಲು, ನೈತಿಕ ಸಮಿತಿಯು ಮಹುವಾ ಮೊಯಿತ್ರಾ ಅವರನ್ನು ಅಕ್ಟೋಬರ್ 31ರಂದು ಹಾಜರಾಗುವಂತೆ ಕೇಳಿತ್ತು. ಆದರೆ ಮಹುವಾ ಸಮಿತಿಯನ್ನು ನವೆಂಬರ್ 5ರ ನಂತರ ದಿನಾಂಕ ನೀಡುವಂತೆ ವಿನಂತಿಸಿದರು. ಆದರೆ ನೈತಿಕ ಸಮಿತಿಯು ಮಹುವಾ ಅವರನ್ನು ನವೆಂಬರ್ 2ರಂದು ತಮ್ಮ ಉತ್ತರ ನೀಡಲು ಬರುವಂತೆ ಕೇಳಿದೆ.
ಈ ವಿಷಯದಲ್ಲಿ ಲೋಕಸಭೆಯ ನೈತಿಕ ಸಮಿತಿಯು ಈಗಾಗಲೇ ಬಿಜೆಪಿ ನಾಯಕ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಅವರ ಅಭಿಪ್ರಾಯಗಳನ್ನು ಕೇಳಿದೆ. ತನ್ನ ಮೊದಲ ಸಭೆಯ ನಂತರ, ನೈತಿಕ ಸಮಿತಿಯು ಈ ಪ್ರಕರಣದಲ್ಲಿ ಮಹುವಾ ಮೊಯಿತ್ರಾ ಅವರ ಉತ್ತರ ತಿಳಿದ ನಂತರ ಈ ಪ್ರಕರಣದಲ್ಲಿ ಬೇರೆ ಸಾಕ್ಷಿಗಳು ಹಾಜರಾಗುವ ಅಗತ್ಯವಿಲ್ಲ ಎಂದು ಹೇಳಿತ್ತು.
ಉದ್ಯಮಿ ಹೀರಾನಂದಾನಿ ಅವರ ಇಚ್ಛೆಯ ಮೇರೆಗೆ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಮೊಯಿತ್ರಾ ಲಂಚ ಮತ್ತು ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ ಎಂಬ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ಆರೋಪವನ್ನು ಸಮಿತಿಯು ತನಿಖೆ ನಡೆಸುತ್ತಿದೆ.
ಗುರುವಾರ, ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್ ಅವರು ತೃಣಮೂಲ ಕಾಂಗ್ರೆಸ್ ಸಂಸದೆ ಮೊಯಿತ್ರಾ ವಿರುದ್ಧ ಸಮಿತಿಗೆ 'ಮೌಖಿಕ ಸಾಕ್ಷ್ಯ' ನೀಡಿದರು.
ಮೋಯಿತ್ರಾ ಅವರು ನನ್ನ ವಿರುದ್ಧ ದುಬೆ ಮತ್ತು ಅನಂತ್ ದೇಹದ್ರಾಯ್ ಹೊರಿಸಲಾದ ಸುಳ್ಳು, ದುರುದ್ದೇಶಪೂರಿತ ಮತ್ತು ಮಾನಹಾನಿಕರ ಆರೋಪಗಳ ವಿರುದ್ಧ ನ್ಯಾಯಯುತ ವಿಚಾರಣೆ ಮತ್ತು ನನ್ನನ್ನು ಸಮರ್ಥಿಸಿಕೊಳ್ಳಲು ಸಾಕಷ್ಟು ಅವಕಾಶವನ್ನು ನೀಡಬೇಕು ಎಂದು ಹೇಳಿದ್ದಾರೆ.