ದೇಶ

ಮರಾಠ ಮೀಸಲಾತಿ: ಶಿಂಧೆ ಶಿವಸೇನೆ ಸಂಸದ ಹೇಮಂತ್ ಪಾಟೀಲ್ ರಾಜೀನಾಮೆ

Lingaraj Badiger

ಮುಂಬೈ: ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಿವಸೇನೆ ನಾಯಕ ಹೇಮಂತ್ ಪಾಟೀಲ್ ಅವರು ಸಂಸದ ಸ್ಥಾನಕ್ಕೆ ಭಾನುವಾರ ರಾಜೀನಾಮೆ ನೀಡಿದ್ದಾರೆ.

ಹಿಂಗೋಲಿ ಲೋಕಸಭಾ ಕ್ಷೇತ್ರದ ಸಂಸದ ಹೇಮಂತ್ ಪಾಟೀಲ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕಳುಹಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದ ಮೀಸಲಾತಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದು, ಈ ವಿಚಾರದಲ್ಲಿ ಸಮುದಾಯದ ಭಾವನೆಗಳು ಬಲವಾಗಿವೆ. ಹಲವು ವರ್ಷಗಳಿಂದ ಮರಾಠ ಸಮುದಾಯಕ್ಕಾಗಿ, ರೈತರಿಗಾಗಿ ಸಕ್ರಿಯವಾಗಿ ಹೋರಾಟ ಮಾಡುತ್ತಿದ್ದೇನೆ. ಈಗ ಮರಾಠ ಮೀಸಲಾತಿಗೆ ಒತ್ತಾಯಿಸಿ ನನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಮಂತ್ ಪಾಟೀಲ್ ಹೇಳಿದ್ದಾರೆ.

ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹೋರಾಟಗಾರ ಮನೋಜ್ ಜಾರಂ ಅವರು, ಸರ್ಕಾರ ಕೂಡಲೇ ಮೀಸಲಾತಿ ನೀಡದಿದ್ದರೆ ಅಕ್ಟೋಬರ್ 29 ರಿಂದ ಮಹಾರಾಷ್ಟ್ರದ ಪ್ರತಿ ಹಳ್ಳಿಗಳಲ್ಲಿ ಸರಣಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

SCROLL FOR NEXT