ದೇಶ

ದೆಹಲಿ ಅಬಕಾರಿ ನೀತಿ ಹಗರಣ: ಎಎಪಿ ನಾಯಕ ಮನೀಶ್ ಸಿಸೋಡಿಯಾಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್

Ramyashree GN

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಈಗ ರದ್ದುಗೊಂಡಿರುವ ಅಬಕಾರಿ ನೀತಿ ಹಗರಣದ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕ ಮತ್ತು ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರಿದ್ದ ಪೀಠವು, ಪ್ರಕರಣವನ್ನು ಉನ್ನತ ನ್ಯಾಯಾಲಯವು ವಿಶ್ಲೇಷಿಸಿದ ನಂತರ ಕೆಲವು ಅಂಶಗಳು ಅನುಮಾನಾಸ್ಪದವಾಗಿರುವುದು ಕಂಡುಬಂದಿದೆ ಎಂದು ಹೇಳಿದೆ.

'ಈ ವಿಶ್ಲೇಷಣೆಯಲ್ಲಿ, 338 ಕೋಟಿ ರೂ. ವರ್ಗಾವಣೆಗೆ ಸಂಬಂಧಿಸಿದಂತೆ ಕೆಲವು ಅನುಮಾನಾಸ್ಪದ ಅಂಶಗಳು ಕಂಡುಬಂದಿವೆ. ಹೀಗಾಗಿ, ನಾವು ಜಾಮೀನು ತಿರಸ್ಕರಿಸಿದ್ದೇವೆ' ಎಂದು ಪೀಠ ಹೇಳಿತು.

ಈಗ ರದ್ದಾಗಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಏಳು ತಿಂಗಳಿನಿಂದ ಜೈಲಿನಲ್ಲಿರುವ ಸಿಸೋಡಿಯಾ ಅವರನ್ನು ಫೆಬ್ರುವರಿ 26 ರಂದು ಸಿಬಿಐ ಬಂಧಿಸಿತು ಮತ್ತು ನಂತರ ಮಾರ್ಚ್ 9ರಂದು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿತು. 

ಈ ಹಿಂದೆ ದೆಹಲಿ ಹೈಕೋರ್ಟ್ ಕೂಡ ಎಎಪಿ ನಾಯಕನಿಗೆ ಜಾಮೀನು ನಿರಾಕರಿಸಿತ್ತು.

ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು 56 ಪುಟಗಳ ಆದೇಶದಲ್ಲಿ 'ಆರೋಪಿ ಹೊಂದಿರುವ ಉನ್ನತ ರಾಜಕೀಯ ಸ್ಥಾನಮಾನ ಮತ್ತು ದೆಹಲಿಯಲ್ಲಿ ಅಧಿಕಾರದಲ್ಲಿರುವ ಪಕ್ಷದಲ್ಲಿನ ಅವರ ಸ್ಥಾನದಿಂದಾಗಿ 'ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ' ಎಂದಿದ್ದರು. ಏಪ್ರಿಲ್ 28ರಂದು ಅವರಿಗೆ ಜಾಮೀನು ನಿರಾಕರಿಸಿದ ಹಿಂದಿನ ವಿಶೇಷ ನ್ಯಾಯಾಲದ ತೀರ್ಪನ್ನು ಎತ್ತಿಹಿಡಿದಿದ್ದರು.

SCROLL FOR NEXT