ದೇಶ

ಐಫೋನ್‌ ಹ್ಯಾಕಿಂಗ್ ಬಗ್ಗೆ ವಿಪಕ್ಷಗಳ ಸಂಸದರಿಗೆ ಆ್ಯಪಲ್ ಎಚ್ಚರಿಕೆ ಸಂದೇಶ: ತನಿಖೆಗೆ ಆದೇಶಿಸಿದ ಕೇಂದ್ರ

Ramyashree GN

ನವದೆಹಲಿ: ಸರ್ಕಾರಿ ಪ್ರಾಯೋಜಿತ ದಾಳಿಕೋರರು ತಮ್ಮ ಐಫೋನ್‌ಗಳಿಂದ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸೂಚಿಸುವ ಎಚ್ಚರಿಕೆ ಸಂದೇಶಗಳನ್ನು ಆ್ಯಪಲ್‌ ಕಂಪನಿಯಿಂದ ಸ್ವೀಕರಿಸಿರುವ ಬಗ್ಗೆ ವಿಪಕ್ಷಗಳ ಸಂಸದರು ಹೇಳಿದ ನಂತರ ಕೇಂದ್ರ ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಐಟಿ ಸಚಿವ ಅಶ್ವಿನಿ ವೈಷ್ಣವ್, 'ದೇಶದ ಎಲ್ಲಾ ನಾಗರಿಕರ ಗೌಪ್ಯತೆ ಮತ್ತು ಭದ್ರತೆಯನ್ನು ರಕ್ಷಿಸುವಲ್ಲಿ ಸರ್ಕಾರವು ಬದ್ಧವಾಗಿದೆ. ಈ ವಿಚಾರವನ್ನು ಸರ್ಕಾರ  ಬಹಳ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಈ ಎಚ್ಚರಿಕೆ ಸಂದೇಶಗಳಿಗೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಕೂಲಂಕಷವಾಗಿ ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು ತನಿಖೆ ನಡೆಸುತ್ತದೆ' ಎಂದು ಹೇಳಿದ್ದಾರೆ.

'ರಾಜ್ಯ ಪ್ರಾಯೋಜಿತ ದಾಳಿಗಳ ಬಗ್ಗೆ ಮಾಹಿತಿ ಮತ್ತು ವ್ಯಾಪಕವಾದ ವದಂತಿಗಳ ಬೆನ್ನಲ್ಲೇ, ಆಪಾದಿತ ಆರೋಪಗಳ ಮೇಲಿನ ತನಿಖೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ನಾವು ಆ್ಯಪಲ್ ಕಂಪನಿಯನ್ನು ಕೇಳಿದ್ದೇವೆ' ಎಂದು ಸಚಿವರು ತಿಳಿಸಿದ್ದಾರೆ.

ಭೋಪಾಲ್‌ನಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ದೇಶದ ಪ್ರಗತಿಯನ್ನು ಸಹಿಸಲಾಗದವರು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಮತ್ತು ಗೊಂದಲವನ್ನು ಸೃಷ್ಟಿಸುವ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಪ್ರತಿಪಕ್ಷಗಳನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

ಆ್ಯಪಲ್ ಎಚ್ಚರಿಕೆ ಸಂದೇಶ ಕಳುಹಿಸಿದ್ದು ಯಾರಿಗೆ?

ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್‌ಗಳನ್ನು ಹ್ಯಾಕ್ ಮಾಡಬಹುದು ಎಂದು ತಂತ್ರಜ್ಞಾನ ಕಂಪನಿ ಆ್ಯಪಲ್ ಮಂಗಳವಾರ ಪ್ರತಿಪಕ್ಷಗಳ ಐವರು ಸಂಸದರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಅದನ್ನು ವಿರೋಧ ಪಕ್ಷಗಳು ಸಂಸದರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಶಿವಸೇನೆಯ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ಮತ್ತು ಎಎಪಿಯ ರಾಘವ್ ಚಡ್ಡಾ, ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತು ಎಐಎಂಐಎಂನ ಅಸಾದುದ್ದೀನ್ ಓವೈಸಿ ಎಚ್ಚರಿಕೆ ಸಂದೇಶಗಳನ್ನು ಸ್ವೀಕರಿಸಿದ್ದಾರೆ. 

ಆ್ಯಪಲ್ ಹೇಳಿದ್ದೇನು?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆ್ಯಪಲ್, ಇದು ಯಾವುದೇ ನಿರ್ದಿಷ್ಟ ಸರ್ಕಾರಿ ಪ್ರಾಯೋಜಿತ ದಾಳಿ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲದೆ, ಈ ಎಚ್ಚರಿಕೆ ಸಂದೇಶಗಳನ್ನು ನೀಡಿರುವ ಹಿಂದಿನ ಕಾರಣ ಏನೆಂಬುದರ ಬಗ್ಗೆಯೂ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿದೆ.

ಕೆಲವು ಎಚ್ಚರಿಕೆ ಸಂದೇಶಗಳು ತಪ್ಪು ಮಾಹಿತಿಯೂ ಆಗಿರಬಹುದು ಮತ್ತು ಇನ್ನೂ ಕೆಲವು ದಾಳಿಗಳು ಗೊತ್ತಾಗದೇ ಇರಬಹುದು. ಹೀಗಾಗಿ, ಯಾವುದೇ ನಿರ್ದಿಷ್ಟ ಸರ್ಕಾರಿ ಪ್ರಾಯೋಜಿತ ಹ್ಯಾಕಿಂಗ್ ಯತ್ನ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ. ಅಂತಹ ದಾಳಿಗಳನ್ನು ಪತ್ತೆಹಚ್ಚುವುದು ಗುಪ್ತಚರ ಸಂಕೇತಗಳ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದೆ.

SCROLL FOR NEXT