ದೇಶ

ಕೌಶಲ್ಯಾಭಿವೃದ್ಧಿ ಯೋಜನೆ ಹಗರಣ: ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಮಧ್ಯಂತರ ಜಾಮೀನು ಮಂಜೂರು

Manjula VN

ಹೈದರಾಬಾದ್​: ಕೌಶಲ್ಯಾಭಿವೃದ್ಧಿ ಯೋಜನೆ ಹಗರಣದಲ್ಲಿ ಜೈಲು ಪಾಲಾಗಿದ್ದ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಹೈಕೋರ್ಟ್​ ಮಂಗಳವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಜಾಮೀನಿನ ಅವಧಿ ಮುಂದಿನ 4 ವಾರಗಳವರೆಗೆ ಇರಲಿದೆ.

ವೈದ್ಯಕೀಯ ಚಿಕಿತ್ಸೆಗಾಗಿ ಜಾಮೀನು ಕೋರಿ ನಾಯ್ಡು ಅವರು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ್ದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.

ನ್ಯಾಯಮೂರ್ತಿ ತಲ್ಲಪ್ರಗಡ ಮಲ್ಲಿಕಾರ್ಜುನ ರಾವ್ ಅವರು ಇಂದು ತೀರ್ಪು ಪ್ರಕಟಿಸಿದ್ದು, 4 ವಾರಗಳ ಕಾಲ ಜಾಮೀನನ್ನು ಮಂಜೂರು ಮಾಡಿದ್ದಾರೆ.

ಇದಕ್ಕೂ ಮೊದಲು ಚಂದ್ರಬಾಬು ಅವರಿಗೆ ಜಾಮೀನು ನೀಡಲು ಎಸಿಬಿ ನ್ಯಾಯಾಲಯ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೊರೆ ಮೆಟ್ಟಿಲೇರಿದ್ದರು.ವೈದ್ಯಕೀಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡುವಂತೆ ಪೂರಕ ಅರ್ಜಿ ಸಲ್ಲಿಸಿದ್ದರು.

ಚಂದ್ರಬಾಬು ಪರವಾಗಿ ಹಿರಿಯ ವಕೀಲ ಧಮ್ಮಲಪತಿ ಶ್ರೀನಿವಾಸ್ ಅವರು ವಾದ ಮಂಡಿಸಿದ್ದರು. ರಾಜ್ಯ ಸರ್ಕಾರದ ಪರವಾಗಿ ಎಎಜಿ ಪೊನ್ನವೋಲು ಸುಧಾಕರ ರೆಡ್ಡಿ ವಾದಿಸಿದರು.

ಜಾಮೀನು ಸಿಕ್ಕ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಯ್ಡು ಪರ ವಕೀಲರು, ಚಂದ್ರಬಾಬು ಅವರ ಆರೋಗ್ಯದ ದೃಷ್ಟಿಯಿಂದ ಜಾಮೀನು ನೀಡಲಾಗಿದೆ. ಕಳೆದ 50 ದಿನಗಳಿಂದ ಜೈಲಿನಲ್ಲಿರುವ ಬಾಬು ಅವರು ವೈದ್ಯಕೀಯ ತಪಾಸಣೆಗೆ ಒಳಗಾಗಲಿದ್ದಾರೆ ಎಂದು ತಿಳಿಸಿದರು.

SCROLL FOR NEXT