ದೇಶ

ನಾಯಿ ಕಚ್ಚಿದ ವಿಚಾರ ಪೋಷಕರಿಂದ ಮುಚ್ಚಿಟ್ಟ ಬಾಲಕ; ತಿಂಗಳ ಬಳಿಕ ರೇಬಿಸ್‍ನಿಂದ ಸಾವು

Shilpa D

ಗಾಜಿಯಾಬಾದ್: ಒಂದು ತಿಂಗಳ ಹಿಂದೆ ನಾಯಿ  ಕಚ್ಚಿದ ಘಟನೆಯನ್ನು ಪೋಷಕರಿಗೆ ಮುಚ್ಚಿಟ್ಟಿದ್ದ 14 ವರ್ಷದ ಬಾಲಕ ರೇಬಿಸ್‍ನಿಂದ ಮೃತಪಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

8ನೇ ತರಗತಿಯ ವಿದ್ಯಾರ್ಥಿ ಶಹವಾಜ್‍ನನ್ನು ಆರೋಗ್ಯ ಹದಗೆಟ್ಟ ಪರಿಣಾಮ ಸೋಮವಾರ ಸಂಜೆ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಂತೆಯೇ ಅಲ್ಲಿ ಚಿಕಿತ್ಸೆ ಪಡೆದು ಬುಲಂದ್‍ಶಹರ್‍ನಿಂದ ಗಾಜಿಯಾಬಾದ್‍ಗೆ ಮರಳಿ ಕರೆತರುತ್ತಿದ್ದಾಗ ಮೃತಪಟ್ಟಿದ್ದಾನೆ.

ವಿಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚರಣ್ ಸಿಂಗ್ ಕಾಲೋನಿ ನಿವಾಸಿ ಶಹವಾಜ್‍ಗೆ ಒಂದೂವರೆ ತಿಂಗಳ ಹಿಂದೆ ನೆರೆಮನೆಯ ನಾಯಿ ಕಚ್ಚಿತ್ತು. ಆದರೆ ಈತ ಭಯದಿಂದ ಅದನ್ನು ಪೋಷಕರಿಂದ ಮುಚ್ಚಿಟ್ಟಿದ್ದನು. ಕ್ರಮೇಣ ಈತನ ಆರೋಗ್ಯದಲ್ಲಿ ವ್ಯತ್ಯಾಸಗಳಾಗಲು ಶುರುವಾಯಿತು.

ಅಲ್ಲದೆ ಸೆಪ್ಟೆಂಬರ್ 1 ರಿಂದ ಊಟ ಮಾಡುವುದುನ್ನು ಕೂಡ ನಿಲ್ಲಿಸಿದ್ದಾನೆ. ಮಗನ ವರ್ತನೆಯಿಂದ ಬೇಸತ್ತ ಪೋಷಕರು ಏನಾಯ್ತು ಎಂದು ಕೇಳಿದ್ದಾರೆ. ಈ ವೇಳೆ ಆತ ತನಗೆ ತಿಂಗಳ ಹಿಂದೆ ಪಕ್ಕದ ಮನೆಯ ನಾಯಿ ಕಚ್ಚಿರುವ ವಿಚಾರವನ್ನು ತಿಳಿಸಿದ್ದಾನೆ.

ಕೂಡಲೇ ಶಹವಾಜ್‍ನನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ಆತನನ್ನು ವೈದ್ಯರು ದಾಖಲಿಸಿಕೊಳ್ಳದೆ ಔಷಧಿ ಕೊಟ್ಟು ಕಳುಹಿಸಿದ್ದಾರೆ. ಆ ಬಳಿಕ ಕಳೆದ ವಾರ ಆಯುರ್ವೇದಿಕ್ ಔಷಧಿಯ ಮೊರೆ ಹೋಗಿರುವುದಾಗಿ ಪೊಲೀಸರ ಬಳಿ ಪೋಷಕರು ತಿಳಿಸಿದ್ದಾರೆ.

ಅಂಬುಲೆನ್ಸ್‍ನಲ್ಲಿ ಗಾಜಿಯಾಬಾದ್‍ಗೆ ವಾಪಸ್ ಕರೆತರುವಾಗ ಬಾಲಕ ಮೃತಪಟ್ಟಿದ್ದಾನೆ. ಈ ಸಂಬಂಧ ದೂರು ದಾಖಲಾಗಿದೆ, ಮಗು ರೇಬಿಸ್‌ನಿಂದ ನರಳುತ್ತಿರುವು ವಿಡಿಯೋ ವೈರಲ್ ಆಗಿದ್ದು, ಮನಕಲಕುವಂತಿದೆ. ಇಂತಹ ಪರಿಸ್ಥಿತಿ ಯಾವ ಮಗುವಿಗೂ ಬರಬಾರದು ಎಂದು ಅನೇಕ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಜಾಗೃತಿ ವಹಿಸುವಂತೆ ಮನವಿ ಮಾಡಿದ್ದಾರೆ.

SCROLL FOR NEXT