ದೇಶ

ಅದಾನಿ ಗ್ರೂಪ್‌ ಖರೀದಿ ಬೆಲೆ ನಿಗದಿ ನಂತರ ಹಿಮಾಚಲದ ರೈತರು ಸೇಬುಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದಾರೆ: ಪ್ರಿಯಾಂಕಾ

Ramyashree GN

ನವದೆಹಲಿ: ಅದಾನಿ ಗ್ರೂಪ್ ಸೇಬು ಖರೀದಿ ಬೆಲೆ ಬಿಡುಗಡೆ ಮಾಡಿದ ನಂತರ ವಿಪತ್ತು ಪೀಡಿತ ಹಿಮಾಚಲ ಪ್ರದೇಶದಲ್ಲಿ ಸೇಬು ಬಾಕ್ಸ್‌ಗಳನ್ನು ಮೂರನೇ ಒಂದು ಭಾಗದಷ್ಟು ಅತಿ ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆರೋಪಿಸಿದ್ದಾರೆ. 

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರು ಏಕೆ ಯಾವ ಕ್ರಮವನ್ನೂ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿರುವ ಅವರು, 'ಹಿಮಾಚಲ ಪ್ರದೇಶದ ಬೆಳೆಗಾರರು ಈಗಾಗಲೇ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸುತ್ತಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ, ಪ್ರಧಾನಿಯವರ ಸ್ನೇಹಿತ ಅದಾನಿ ಅವರಿಗೆ ಏಕೆ ಮತ್ತಷ್ಟು ತೊಂದರೆ ನೀಡುತ್ತಿದ್ದಾರೆ' ಎಂದಿದ್ದಾರೆ.

ವರದಿಗಳನ್ನು ಉಲ್ಲೇಖಿಸಿ, ಅದಾನಿ ಗ್ರೂಪ್ ಗುಡ್ಡಗಾಡು ರಾಜ್ಯದಲ್ಲಿ ಸೇಬು ಖರೀದಿಯ ಕನಿಷ್ಠ ಬೆಲೆಯನ್ನು ಬಿಡುಗಡೆ ಮಾಡಿದ ನಂತರ, ಸೇಬು ಹಣ್ಣುಗಳ ಬಾಕ್ಸ್‌ಗಳನ್ನು ಈ ಹಿಂದಿನ ಬೆಲೆಯ ಮೂರನೇ ಒಂದು ಭಾಗಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

'ವಿಪತ್ತಿನ ಸಂದರ್ಭದಲ್ಲಿ ಇಂತಹ ಕೆಲಸವನ್ನು ಮಾಡುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಸದ್ಯ ಹಿಮಾಚಲ ಪ್ರದೇಶದ ರೈತರು ಮತ್ತು ತೋಟಗಾರರಿಗೆ ಸಹಾಯದ ಅಗತ್ಯವಿರುವಾಗ, ಅವರು ಹಾನಿಗೆ ಗುರಿಯಾಗುತ್ತಿದ್ದಾರೆ' ಎಂದು ಅವರು ಹೇಳಿದರು.

'ಈ ಲೂಟಿಯನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿಯವರು ಏಕೆ ಏನನ್ನೂ ಮಾಡುತ್ತಿಲ್ಲ?' ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ.
ಈ ಆರೋಪಗಳಿಗೆ ಅದಾನಿ ಸಮೂಹದಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಹಿಮಾಚಲ ಪ್ರದೇಶವು ಕಳೆದ ತಿಂಗಳು ಭಾರಿ ಮಳೆ ಮತ್ತು ಭೂಕುಸಿತದಿಂದ ತತ್ತರಿಸಿ ಹೋಗಿದೆ.

SCROLL FOR NEXT