ದೇಶ

ಹಿಂದೂ ಧರ್ಮದ ಅವಹೇಳನದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮೌನ: ರವಿಶಂಕರ್ ಪ್ರಸಾದ್ ಕಿಡಿ

Lingaraj Badiger

ಪಾಟ್ನಾ: ಮಿತ್ರ ಪಕ್ಷವಾದ ಡಿಎಂಕೆ, ಅಲ್ಲದೆ ತನ್ನ ಪಕ್ಷದ ಕೆಲವು ನಾಯಕರು ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆಗಳ ಕುರಿತು ಕಾಂಗ್ರೆಸ್ ಉನ್ನತ ನಾಯಕರು "ಮೌನ"ವಾಗಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಅವರು ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಪ್ರಸಾದ್, ಇತ್ತೀಚೆಗೆ ಮುಂಬೈನಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಹಿಂದೂಗಳನ್ನು ಅವಹೇಳನ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದರು.

ತಮಿಳುನಾಡು ಸಚಿವ ಉದಯನೈಧಿ ಸ್ಟಾಲಿನ್ ಅವರು 'ಸನಾತನ ಧರ್ಮ'ವನ್ನು ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸಿದ್ದನ್ನು ಉಲ್ಲೇಖಿಸಿದ ಪ್ರಸಾದ್, "ಈಗ ಮತ್ತೊಬ್ಬ ಡಿಎಂಕೆ ನಾಯಕ ಎ ರಾಜಾ ಹಿಂದೂ ಧರ್ಮವನ್ನು ಕುಷ್ಠರೋಗ ಮತ್ತು ಎಚ್ಐವಿ / ಏಡ್ಸ್ ಗೆ ಹೋಲಿಸಿದ್ದಾರೆ" ಎಂದು ಕಿಡಿಕಾರಿದರು.

ಇನ್ನು ಕರ್ನಾಟಕದ ಗೃಹ ಸಚಿವ ಜಿ ಪರಮೇಶ್ವರ ಅವರಂತೆ ಕೆಲ ಕಾಂಗ್ರೆಸ್‌ ನಾಯಕರು ಹಿಂದೂ ಧರ್ಮದ ಮೂಲವನ್ನು ಪ್ರಶ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಪುತ್ರ (ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ) ಸನಾತನ ಧರ್ಮದ ಬಗ್ಗೆ ದಿನಕ್ಕೊಂದು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಬಿಜೆಪಿ ಹಿಂದೂ ಧರ್ಮದ ಅವಹೇಳನವನ್ನು ಎಂದಿಗೂ ಸಹಿಸುವುದಿಲ್ಲ ಎಂದರು.

SCROLL FOR NEXT