ಮೈಸೂರು: ಖ್ಯಾತ ವ್ಯಂಗ್ಯಚಿತ್ರಕಾರ ಅಜಿತ್ ನಿನನ್ (68) ಶುಕ್ರವಾರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಹೈದರಾಬಾದಿನಲ್ಲಿ ಜನಿಸಿದ ಅವರು, ಚೆನ್ನೈನಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿ ಪಡೆದ ನಂತರ ವ್ಯಂಗ್ಯಚಿತ್ರಕಾರರಾದರು.
ಶುಕ್ರವಾರ ಬೆಳಗಿನ ಜಾವ ಅಜಿತ್ ಅವರಿಗೆ ಹೃದಯಾಘಾತ ಆಗಿತ್ತು. ತಕ್ಷಣ ವೈದ್ಯಕೀಯ ಸಹಾಯಕ್ಕೆ ಪ್ರಯತ್ನ ಪಟ್ಟರೂ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಇಂದಿರಾ ಗಾಂಧಿ, ವಾಜಪೇಯಿಯವರಿಂದ ಹಿಡಿದು ನರೇಂದ್ರ ಮೋದಿಯವರವರೆಗೆ ಅವರು ವ್ಯಂಗ್ಯ ಚಿತ್ರ ಬಿಡಿಸಿದ್ದಾರೆ. ಕೆಲವು ಪ್ರಧಾನ ಮಂತ್ರಿಗಳು ಅವರ ವ್ಯಂಗ್ಯಚಿತ್ರದಿಂದ ತಪ್ಪಿಸಿಕೊಂಡಿದ್ದಾರೆ ಆದರೆ ಶೈಲಿಯು ಯಾವಾಗಲೂ ನಿಷ್ಪಕ್ಷಪಾತವಾಗಿತ್ತು.
ಇಂಡಿಯಾ ಟುಡೆ, ಔಟ್ ಲುಕ್, ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಕಾರರಾಗಿ ದುಡಿದರು. ಇಂಡಿಯಾ ಟುಡೆ ಪತ್ರಿಕೆ ಬಳಗದ ‘ಟಾರ್ಗೆಟ್’ ಎಂಬ ಮಕ್ಕಳ ಪತ್ರಿಕೆಗೆ ‘ಡಿಟೆಕ್ಟಿವ್ ಮೂಚುವಾಲಾ’ ಎಂಬ ಸರಣಿ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದರು. ಬಳಿಕ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ನಿತ್ಯ ವ್ಯಂಗ್ಯಚಿತ್ರ ಬರೆಯುತ್ತಿದ್ದರು.
ದೆಹಲಿಯಲ್ಲಿದ್ದ ಅವರು, ಎರಡು ವರ್ಷಗಳ ಹಿಂದೆ ಮೈಸೂರಿನ ಕೆಆರ್ ಎಸ್ ರಸ್ತೆಯ ಅಪಾರ್ಟ್ ಮೆಂಟ್ ವೊಂದರ ಫ್ಲಾಟ್ ನಲ್ಲಿ ವಾಸಿಸುತ್ತಿದ್ದರು. ಅವರ ಅಂತ್ಯಕ್ರಿಯೆ ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಭಾನುವಾರ (ಸೆ10) ಮಧ್ಯಾಹ್ನ ಒಂದು ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಅಜಿತ್ ನಿನನ್ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.
ಅಜಿತ್ ನಿನನ್ ಅವರು ತಮ್ಮ ವ್ಯಂಗ್ಯ ಚಿತ್ರಗಳ ಮೂಲಕ ಪ್ರತಿ ಸರ್ಕಾರದ ಕೋಪಕ್ಕೆ ಗುರಿಯಾಗಿದ್ದರು "ನೆವರ್ ಪುಟ್ ಎ ಕಾರ್ಟೂನಿಸ್ಟ್ ಬಿಹೈಂಡ್ ಬಾರ್ " ಎಂಬ ಶೀರ್ಷಿಕೆಯ ರೇಖಾ ಚಿತ್ರ ಭಾರೀ ಪ್ರಸಿದ್ದವಾಗಿತ್ತು. ಈ ಚಿತ್ರದಲ್ಲಿ ಒಳಉಡುಪಿನಲ್ಲಿ ಜೈಲರ್ ನ ರೇಖಾಚಿತ್ರವನ್ನು ನೋಡುತ್ತಿರುವಾಗ ಜೈಲು ಕೈದಿಗಳು ನಗುತ್ತಿರುವ ಕಾರ್ಟೂನ್ ಎಲ್ಲರ ಗಮನ ಸೆಳೆದಿತ್ತು.