ದೇಶ

ಕೇರಳದಲ್ಲಿ 5ನೇ ನಿಫಾ ವೈರಸ್ ಪ್ರಕರಣ: ಆರೋಗ್ಯ ಸಿಬ್ಬಂದಿಗೆ ಸೋಂಕು ದೃಢ

Srinivasamurthy VN

ಕೊಚ್ಚಿನ್: ಕೇರಳದಲ್ಲಿ ನಿಫಾ ವೈರಸ್ ಹಾವಳಿ ಹೆಚ್ಚಾಗಿದ್ದು, ದೇವರನಾಡಿನಲ್ಲಿ ನಿಫಾ ವೈರಸ್ ನ ಐದನೇ ಪ್ರಕರಣ ವರದಿಯಾಗಿದೆ.

24 ವರ್ಷದ ಆರೋಗ್ಯ ಕಾರ್ಯಕರ್ತರೊಬ್ಬರು ಕೇರಳದ ಐದನೇ ನಿಫಾ ವೈರಸ್ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ. ಪ್ರಸ್ತುತ ಸೋಂಕಿತರ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಗ್ಯ ಕಾರ್ಯಕರ್ತೆಯ ಸ್ಯಾಂಪಲ್‌ಗಳು ಪಾಸಿಟಿವ್ ಆದ ಬಳಿಕ ನಿಫಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿಕೆ ನೀಡಿದ್ದಾರೆ. 

9 ವರ್ಷದ ಬಾಲಕ ಕೋಝಿಕ್ಕೋಡ್‌ನ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಂಬಲದಲ್ಲಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಜಾರ್ಜ್ ತಿಳಿಸಿದ್ದಾರೆ.

ಈಗಾಗಲೇ ಮಾರಣಾಂತಿಕ ಸೋಂಕಿನಿಂದ ಬಳಲುತ್ತಿರುವ 9 ವರ್ಷದ ಬಾಲಕನನ್ನು ಗುಣಪಡಿಸಲು ಸರ್ಕಾರವು ತನ್ನ ಪ್ರಯತ್ನಗಳನ್ನು ಹೆಚ್ಚಿಸಿದೆ ಮತ್ತು ಲಭ್ಯವಿರುವ ಏಕೈಕ ಆಂಟಿವೈರಲ್ ಚಿಕಿತ್ಸೆಯನ್ನು ನೀಡುವಂತೆ ಆದೇಶಿಸಿದ್ದು, ಮಗುವಿಗೆ ಚಿಕಿತ್ಸೆ ನೀಡಲು ಸರ್ಕಾರ ಐಸಿಎಂಆರ್‌ನಿಂದ ಮೊನೊಕ್ಲೋನಲ್ ಆ್ಯಂಟಿಬಾಡಿಗೆ ಆದೇಶಿಸಿದೆ. ನಿಫಾ ವೈರಸ್ ಸೋಂಕಿಗೆ ಇದು ಲಭ್ಯವಿರುವ ಏಕೈಕ ಆಂಟಿವೈರಲ್ ಚಿಕಿತ್ಸೆಯಾಗಿದೆಯಾದರೂ ಇದು ಇನ್ನೂ ಪ್ರಾಯೋಗಿಕವಾಗಿ ಸಾಬೀತಾಗಿಲ್ಲ.

ರಾಜ್ಯದಲ್ಲಿ ಕಂಡುಬರುವ ವೈರಸ್ ಸ್ಟ್ರೈನ್ (ರೂಪಾಂತರ) ಬಾಂಗ್ಲಾದೇಶದ ರೂಪಾಂತರವಾಗಿದ್ದು ಅದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಮತ್ತು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ, ಆದರೂ ಇದು ಕಡಿಮೆ ಸಾಂಕ್ರಾಮಿಕವಾಗಿದೆ ಎಂದು ಸರ್ಕಾರ ಹೇಳಿದೆ.

SCROLL FOR NEXT