ದೇಶ

ಭಾರತದ ಗ್ರೀನ್ ಆಫೀಸ್ ಸ್ಪೇಸ್ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರ ಸ್ಥಾನ, ದೆಹಲಿ ಎನ್ ಸಿಆರ್ ಗೆ 2ನೇ ಸ್ಥಾನ 

Lingaraj Badiger

ನವದೆಹಲಿ: ಉದ್ಯಾನ ನಗರಿ ಬೆಂಗಳೂರು ಭಾರತದ ಗ್ರೀನ್ ಆಫೀಸ್ ಸ್ಪೇಸ್(ಹಸಿರು ಕಚೇರಿ ಸ್ಥಳಾವಕಾಶ)ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದು, ದೇಶದ ಶೇಕಡಾ 30 ರಷ್ಟು ಅಂದರೆ 104.5 ಮಿಲಿಯನ್ ಚದರ ಅಡಿ ಹಸಿರು ಕಚೇರಿಗಳನ್ನು ಸಿಲಿಕಾನ್ ಸಿಟಿ ಹೊಂದಿದೆ. ಈ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿ ಪ್ರದೇಶ(ಎನ್‌ಸಿಆರ್) ನಂತರದ ಸ್ಥಾನದಲ್ಲಿದೆ. 

ಬುಧವಾರ ಬಿಡುಗಡೆಯಾದ ರಿಯಲ್ ಎಸ್ಟೇಟ್‌ನ CII-CBRE ವರದಿಯ ಪ್ರಕಾರ, 70.2 ಮಿಲಿಯನ್ ಚದರ ಅಡಿಗಳೊಂದಿಗೆ ದೆಹಲಿ ಎನ್ ಸಿಆರ್ ಎರಡನೇ ಸ್ಥಾನದಲ್ಲಿದೆ.

ದೇಶದ ವಾಣಿಜ್ಯ ರಾಜಧಾನಿ ಮುಂಬೈ, 56.6 ಮಿಲಿಯನ್ ಚದರ ಅಡಿ ಹಸಿರು ಕಚೇರಿಗಳನ್ನು ಹೊಂದುವ ಮೂಲಕ ಮೂರನೇ ಸ್ಥಾನದಲ್ಲಿದೆ. ಹಸಿರು ಕಚೇರಿ ಸ್ಥಳಾವಕಾಶದ ಪಟ್ಟಿಯಲ್ಲಿ ಹೈದರಾಬಾದ್ ನಾಲ್ಕನೆ ಸ್ಥಾನದಲ್ಲಿದ್ದು, ಚೆನ್ನೈ ಮತ್ತು ಪುಣೆ ನಂತರದ ಸ್ಥಾನದಲ್ಲಿವೆ.

2019ಕ್ಕೆ ಹೋಲಿಸಿದರೆ 2023 ರ ಜೂನ್‌ನಲ್ಲಿ ಭಾರತದ ಅಗ್ರ ಆರು ನಗರಗಳಲ್ಲಿ ಹಸಿರು ಪ್ರಮಾಣೀಕೃತ ಕಚೇರಿ ಕಟ್ಟಡಗಳ ಪ್ರದೇಶ ಶೇ. 36 ರಷ್ಟು ಅಂದರೆ 342 ಮಿಲಿಯನ್ ಚದರ ಅಡಿಗಳಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

ಗ್ರೀನ್ ಆಫೀಸ್ ಸ್ಪೇಸ್ ಎಂದರೇನು?

ಗ್ರೀನ್ ಆಫೀಸ್ ಸ್ಪೇಸ್ ಎಂದರೆ ಪರಿಸರ ಜವಾಬ್ದಾರಿ ಮತ್ತು ಸಂಪನ್ಮೂಲ-ಸಮರ್ಥವಾಗಿರುವ ರಚನೆಯನ್ನು ಸೂಚಿಸುತ್ತದೆ. ಹಸಿರು ಕಛೇರಿಗಳನ್ನು ಇಂಧನ ದಕ್ಷತೆ ಮತ್ತು ಮರುಬಳಕೆ ವಸ್ತುಗಳಿಂದ ವಿನ್ಯಾಸಗೊಳಿಸಲಾಗಿರುತ್ತದೆ. ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವುದು, ಇಂಧನ ಉಳಿಸುವುದು ಮತ್ತು ಮಾಲಿನ್ಯ ಕಡಿಮೆ ಮಾಡುವುದು ಇದರ ಗುರಿಯಾಗಿದೆ.

SCROLL FOR NEXT