ದೇಶ

ಕಾವೇರಿ ವಿಚಾರ: ಶೀಘ್ರವೇ ಕರ್ನಾಟಕ, ತಮಿಳುನಾಡು ಸಿಎಂಗಳು ಭೇಟಿಯಾಗಿ ಚರ್ಚಿಸಲಿ; ಬಿಜೆಪಿ ಸಂಸದ ಲೆಹರ್ ಸಿಂಗ್ ಒತ್ತಾಯ

Ramyashree GN

ನವದೆಹಲಿ: ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿರುವ ಲೆಹರ್ ಸಿಂಗ್ ಸಿರೋಯಾ ಅವರು ಬುಧವಾರ ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಭೇಟಿಯಾಗಿ ಕಾವೇರಿ ನದಿ ನೀರು ಹಂಚಿಕೆ ವಿವಾದದ ಬಗ್ಗೆ ಚರ್ಚೆ ನಡೆಸುವಂತೆ ಒತ್ತಾಯಿಸಿದರು.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಪ್ರಧಾನಿ ಕಾರ್ಯಾಲಯ ಮತ್ತು ಕರ್ನಾಟಕ ಮತ್ತು ತಮಿಳುನಾಡು ಮುಖ್ಯ ಕಾರ್ಯದರ್ಶಿಗಳನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಉಭಯ ರಾಜ್ಯ ಸರ್ಕಾರಗಳು ಈ ಸಮಸ್ಯೆಯನ್ನು ಮಾನವೀಯ ಬಿಕ್ಕಟ್ಟು ಎಂದು ಪರಿಗಣಿಸುವುದು ಉತ್ತಮ ಎಂದು ಹೇಳಿದ್ದಾರೆ.

'ಕಾವೇರಿ ನದಿ ನೀರಿನ ಹಂಚಿಕೆಯನ್ನು ಪ್ರಾದೇಶಿಕ ಸಂಘರ್ಷ ಮತ್ತು ಪ್ರಮುಖ ವಿವಾದವಾಗಿ ನೋಡುವ ಹಳೆಯ ಚಕ್ರವನ್ನು ನಾವು ಮುರಿಯಬೇಕು. ಈ ಸಂಘರ್ಷದ ವಿಧಾನವು ದಶಕಗಳಿಂದ ಪ್ರಚಲಿತದಲ್ಲಿದೆ. ಬದಲಾಗಿ, ಇದು ಎರಡು ರಾಜ್ಯ ಸರ್ಕಾರಗಳು ಪ್ರಬುದ್ಧವಾಗಿ ಪರಿಹರಿಸಬೇಕಾದ ಮಾನವೀಯ ಬಿಕ್ಕಟ್ಟು ಎಂದು ನೋಡುವುದು ಉತ್ತಮ. ಈ ವಿಷಯದಲ್ಲಿ ರಾಜಕೀಯ ಮತ್ತು ವಾಕ್ಚಾತುರ್ಯಕ್ಕೆ ಅವಕಾಶ ನೀಡಬಾರದು' ಎಂದು ಲಹರ್ ಸಿಂಗ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

'ಇಬ್ಬರು ಮುಖ್ಯಮಂತ್ರಿಗಳು ಶೀಘ್ರವಾಗಿ ಭೇಟಿಯಾಗುವಂತೆ ಮತ್ತು ಪ್ರಕೃತಿಮಾತೆ ಸೃಷ್ಟಿಸಿರುವ ಈ ಬಿಕ್ಕಟ್ಟಿನ ಕುರಿತು ಚರ್ಚೆಯನ್ನು ಬೇರೆ ದಿಕ್ಕಿನಲ್ಲಿ ನಡೆಸುವಂತೆ ನಾನು ಮತ್ತೊಮ್ಮೆ ಒತ್ತಾಯಿಸುತ್ತೇನೆ' ಎಂದು ಅವರು ಹೇಳಿದರು.

ಈಮಧ್ಯೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಆದೇಶದ ನಂತರ ತಮಿಳುನಾಡಿಗೆ ನೀರು ಬಿಡುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಮುಖಂಡರು ಬೆಂಗಳೂರಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಯಡಿಯೂರಪ್ಪ ಅವರೊಂದಿಗೆ ಸಂಸದೀಯ ಸಮಿತಿ ಸದಸ್ಯ ಡಿವಿ ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

SCROLL FOR NEXT