ದೇಶ

ಮುಂಬೈ: ಇಂದು ಮುಂಜಾನೆ 3 ಗಂಟೆಯವರೆಗೂ 37,599 ಗಣೇಶ ಮೂರ್ತಿ ವಿಸರ್ಜನೆ- ಬಿಎಂಸಿ

Nagaraja AB

ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ 10 ದಿನಗಳ ಕಾಲ ನಡೆದ ಗಣೇಶೋತ್ಸವ ಗುರುವಾರ ಮುಕ್ತಾಯವಾಗುತ್ತಿದ್ದಂತೆ ಭಕ್ತ ಸಾಗರದ ಸಮ್ಮುಖದಲ್ಲಿ ಕೃತಕ ಕೊಳಗಳು ಸೇರಿದಂತೆ ಕೆರೆಗಳಲ್ಲಿ  ಸಾವಿರಾರು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.

ಗುರುವಾರ ಬೆಳಗ್ಗೆ 11.30ಕ್ಕೆ ಆರಂಭವಾದ ಪ್ರಸಿದ್ಧ ಲಾಲ್‌ಬೌಚಾ ರಾಜಾ ವಿಗ್ರಹದ ಮೆರವಣಿಗೆ ಇಡೀ ದಿನ ನಡೆದು ಶುಕ್ರವಾರ ಬೆಳಗ್ಗೆ 9.15ರ ಸುಮಾರಿಗೆ ವಿಸರ್ಜಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶುಕ್ರವಾರ ಮುಂಜಾನೆ 3 ಗಂಟೆಯವರೆಗೆ ನಗರದಾದ್ಯಂತ 37,599 ಕ್ಕೂ ಹೆಚ್ಚು ಮೂರ್ತಿಗಳನ್ನು ನೀರಿನಲ್ಲಿ ಮುಳುಗಿಸಲಾಗಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ. ಗುರುವಾರ ಸಂಜೆ ಜುಹು ಕಡಲತೀರದ ಸಮುದ್ರದಲ್ಲಿ 16 ವರ್ಷದ ಬಾಲಕ ಮುಳುಗಿ ಸಾವನ್ನಪ್ಪಿದ್ದಾನೆ. 

ನಗರದ ವಿವಿಧ ಗಣೇಶ ಮಂಡಳಗಳು 10 ದಿನಗಳ ಕಾಲ ನಡೆದ ಉತ್ಸವದ ಸಮಾರೋಪ ದಿನವಾದ ಗುರುವಾರದಂದು ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಗಣೇಶ ಮೂರ್ತಿಗಳ ನಿಮಜ್ಜನದ ಮೆರವಣಿಗೆ ಆರಂಭಿಸಿದವು. ಶುಕ್ರವಾರ ಬೆಳಗಿನ ಜಾವ 3 ಗಂಟೆಯವರೆಗೆ 31,322 ಗೃಹ ಗಣಪತಿ ಮೂರ್ತಿಗಳು, 5,840 ಸಾರ್ವಜನಿಕ ಮತ್ತು 437 ಗೌರಿ ದೇವಿಯ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ನಾಗರಿಕ ಸಂಸ್ಥೆ ಸ್ಥಾಪಿಸಿದ 11,013 ಮೂರ್ತಿಗಳ  ಕೃತಕ ಕೊಳಗಳಲ್ಲಿ ಮುಳುಗಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮುಂಬೈ ಮತ್ತು ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಗಣೇಶೋತ್ಸವವು ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. 10 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಗಣಪತಿ ಮೂರ್ತಿಗಳನ್ನು ಮನೆಗೆ ತರಲಾಗುತ್ತದೆ ಮತ್ತು ಪಂಡಲ್‌ಗಳಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ವರ್ಷ ಇದು ಸೆಪ್ಟೆಂಬರ್ 19 ರಂದು ಗಣೇಶ ಚತುರ್ಥಿಯೊಂದಿಗೆ ಪ್ರಾರಂಭವಾಯಿತು ಮತ್ತು ಸೆಪ್ಟೆಂಬರ್ 28 ರಂದು ಅನಂತ ಚತುರ್ದಶಿಯೊಂದಿಗೆ ಕೊನೆಗೊಂಡಿತು. 

SCROLL FOR NEXT