ರಾಹುಲ್ ಗಾಂಧಿ
ರಾಹುಲ್ ಗಾಂಧಿ 
ದೇಶ

ಮಾದರಿ ನೀತಿ ಸಂಹಿತೆ ಉಲ್ಲಂಘನೆ; ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಆರ್‌ಎಸ್ ದೂರು

Ramyashree GN

ಹೈದರಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪತ್ರದ ಪ್ರಕಾರ, ರಾಹುಲ್ ಗಾಂಧಿ ಅವರು ಇತ್ತೀಚಿಗೆ ರಾಜ್ಯಕ್ಕೆ ಭೇಟಿ ನೀಡಿದ ಸಮಯದಲ್ಲಿ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಮಾರ್ಚ್ 6ರಂದು ತುಕ್ಕುಗುಡ ಸಾರ್ವಜನಿಕ ಸಭೆಯಲ್ಲಿ ಯಾವುದೇ ಸಾಕ್ಷ್ಯಾಧಾರ ನೀಡದೆ ದೂರವಾಣಿ ಕದ್ದಾಲಿಕೆ ಪ್ರಕರಣದ ಬಗ್ಗೆ ಆಧಾರರಹಿತ ಉಲ್ಲೇಖಗಳನ್ನು ಮಾಡಿದ್ದಾರೆ ಎಂದಿದ್ದು, ಅವರ ಮತ್ತು ಅವರ ಪಕ್ಷದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ.

ಬಿಆರ್‌ಎಸ್ ಮುಖಂಡರಾದ ಕರ್ನೆ ಪ್ರಭಾಕರ್ ಮತ್ತು ದಾಸೋಜು ಶ್ರವಣ್ ಅವರು ಪಕ್ಷದ ಪರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ಪಕ್ಷ ತಿಳಿಸಿದೆ.

ರಾಹುಲ್ ಗಾಂಧಿಯವರ ಹೇಳಿಕೆಗಳ ಬಗ್ಗೆ ತ್ವರಿತ ತನಿಖೆ ನಡೆಸುವಂತೆ ಬಿಆರ್‌ಎಸ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿತು ಮತ್ತು ರಾಹುಲ್ ಗಾಂಧಿ ತಮ್ಮ ಹೇಳಿಕೆಗಳಿಗೆ ಪೂರಕ ಪುರಾವೆಗಳನ್ನು ಒದಗಿಸುವಂತೆ ಒತ್ತಾಯಿಸಿದೆ. ಚುನಾವಣಾ ನಿಯಮಗಳನ್ನು ಉಲ್ಲಂಘಿಸಿರುವ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡದಂತೆ ತಡೆಯಬೇಕು. ರಾಹುಲ್ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷವು ಆಯೋಗಕ್ಕೆ ಮನವಿ ಮಾಡಿದೆ.

ಕಾಂಗ್ರೆಸ್ ನಾಯಕ ವಿಶೇಷವಾಗಿ ಬಿಆರ್‌ಎಸ್ ಪಕ್ಷದ ಅಧ್ಯಕ್ಷ ಕೆಸಿಆರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಪಕ್ಷ ದೂರಿನಲ್ಲಿ ತಿಳಿಸಿದೆ.

ಮಾರ್ಚ್ 6ರಂದು ತುಕ್ಕುಗುಡದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ, 'ನಿಮ್ಮ ಮಾಜಿ ಮುಖ್ಯಮಂತ್ರಿ ಸರ್ಕಾರವನ್ನು ಹೇಗೆ ನಡೆಸುತ್ತಿದ್ದರು ಎಂಬುದು ನಿಮಗೆ ತಿಳಿದಿದೆ. ಅವರು ಸಾವಿರಾರು ಜನರ ಫೋನ್ ಕದ್ದಾಲಿಕೆ ಮಾಡಿದರು ಮತ್ತು ಗುಪ್ತಚರ ಸಂಸ್ಥೆಗಳು, ತೆರಿಗೆ ಏಜೆನ್ಸಿಗಳು ಮತ್ತು ಪೊಲೀಸರನ್ನು ದುರುಪಯೋಗಪಡಿಸಿಕೊಂಡರು' ಎಂದು ಆರೋಪಿಸಿದ್ದರು.

ದೂರಿನೊಂದಿಗೆ ಪಕ್ಷವು ರಾಹುಲ್ ಗಾಂಧಿ ಅವರ ಹೇಳಿಕೆಗಳ ವಿಡಿಯೋಗಳನ್ನು ಸಹ ಲಗತ್ತಿಸಿದೆ.

SCROLL FOR NEXT