ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ 
ದೇಶ

ಮಹಾರಾಷ್ಟ್ರ: ಬಯೋಗ್ಯಾಸ್ ಪಿಟ್‌ಗೆ ಬಿದ್ದಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಐವರು ಸಾವು

Ramyashree GN

ಪುಣೆ: ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಲ್ಲಿ ಬಯೋಗ್ಯಾಸ್ ಪಿಟ್‌ವೊಂದರಲ್ಲಿ ಬಿದ್ದಿದ್ದ ಬೆಕ್ಕನ್ನು ರಕ್ಷಿಸಲು ಯತ್ನಿಸಿದ ಐವರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದ್ದು, ಇದಾದ ಗಂಟೆಗಳ ನಂತರ ಐವರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ಸಂಜೆ ನೆವಾಸಾ ತಹಸಿಲ್‌ನ ವಕ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಾಣಿಗಳ ತ್ಯಾಜ್ಯ ಸಂಗ್ರಹದ ಪಿಟ್‌ನಲ್ಲಿ ಮುಳುಗಿ ಸಾವಿಗೀಡಾಗಿದ್ದ ಐವರು ವ್ಯಕ್ತಿಗಳ ಶವಗಳನ್ನು ಮಧ್ಯರಾತ್ರಿಯ ನಂತರ ಅಧಿಕಾರಿಗಳು ಹೊರತೆಗೆದಿದ್ದಾರೆ ಎಂದು ತಿಳಿಸಿದ್ದಾರೆ.

'ನಾವು ಸಂತ್ರಸ್ತರ ದೇಹಗಳನ್ನು ಜೈವಿಕ ಅನಿಲ ಗುಂಡಿಯಿಂದ ಹೊರತೆಗೆದಿದ್ದೇವೆ. ಬುಧವಾರ ಮಧ್ಯರಾತ್ರಿ 12.30ರ ಹೊತ್ತಿಗೆ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ' ಎಂದು ನೆವಾಸಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಧನಂಜಯ್ ಜಾಧವ್ ತಿಳಿಸಿದ್ದಾರೆ.

ಬೆಕ್ಕೊಂದು ಬಯೋಗ್ಯಾಸ್ ಪಿಟ್‌ಗೆ ಬಿದ್ದಿತ್ತು ಮತ್ತು ಅದನ್ನು ರಕ್ಷಿಸಲು ಒಬ್ಬರು ಕೆಳಗೆ ಇಳಿದಿದ್ದಾರೆ. ಈ ವೇಳೆ ಅವರು ಪ್ರಾಣಿಗಳ ತ್ಯಾಜ್ಯದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ರಕ್ಷಿಸಲು, ಇತರ ಐವರು ಒಬ್ಬರ ನಂತರ ಒಬ್ಬರು ಕೆಳಗಿಳಿದಿದ್ದಾರೆ. ಬಳಿಕ ಎಲ್ಲರೂ ಒಳಗೆ ಸಿಲುಕಿಕೊಂಡಿದ್ದಾರೆ ಎಂದು ಜಾಧವ್ ಹೇಳಿದರು.

ಘಟನೆಯಲ್ಲಿ ಐವರು ಸಾವಿಗೀಡಾಗಿದ್ದು, ಒಬ್ಬರನ್ನು ರಕ್ಷಿಸಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

SCROLL FOR NEXT