ರಾಹುಲ್ ಗಾಂಧಿ
ರಾಹುಲ್ ಗಾಂಧಿ  
ದೇಶ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 150 ಸೀಟುಗಳನ್ನು ಗೆಲ್ಲಬಹುದು: ರಾಹುಲ್ ಗಾಂಧಿ

Sumana Upadhyaya

ಗಾಜಿಯಾಬಾದ್: ಚುನಾವಣಾ ಬಾಂಡ್ ಯೋಜನೆಯು ವಿಶ್ವದಲ್ಲೇ ಅತಿ ದೊಡ್ಡ ಸುಲಿಗೆ ಯೋಜನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ಚಾಂಪಿಯನ್ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಣ್ಣಿಸಿದ್ದಾರೆ.

ಗಾಜಿಯಾಬಾದ್‌ನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷ ಇಂಡಿಯಾ ಒಕ್ಕೂಟ ಪರವಾಗಿ ಜನರ ಒಲವಿದೆ. ಬಿಜೆಪಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ 150 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ ಎಂದರು.

ಚುನಾವಣಾ ಬಾಂಡ್‌ಗಳ ಯೋಜನೆಯು ವಿಶ್ವದ ಅತಿದೊಡ್ಡ ಸುಲಿಗೆ ಯೋಜನೆಯಾಗಿದೆ. ಭಾರತದ ಉದ್ಯಮಿಗಳಿಗೆ ಅದು ಚೆನ್ನಾಗಿ ತಿಳಿದಿದೆ. ಪ್ರಧಾನಿ ಎಷ್ಟೇ ಸ್ಪಷ್ಟಪಡಿಸಿದರೂ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ ಪ್ರಧಾನಿ ಭ್ರಷ್ಟಾಚಾರದ ಚಾಂಪಿಯನ್ ಎಂದು ಇಡೀ ರಾಷ್ಟ್ರಕ್ಕೆ ತಿಳಿದಿದೆ ಎಂದು ಟೀಕಿಸಿದರು.

ಉತ್ತರ ಪ್ರದೇಶದ ಅಮೇಥಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ, ಈ ಬಗ್ಗೆ ತಮ್ಮ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ. ಅಂತಹ ನಿರ್ಧಾರಗಳನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿ ತೆಗೆದುಕೊಳ್ಳುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

ಉತ್ತರ ಪ್ರದೇಶದ ಗಜಿಯಾಬಾದ್‌ನಿಂದ ಗಾಜಿಪುರದವರೆಗೆ ಬದಲಾವಣೆಯ ಗಾಳಿ ಬೀಸಲಿದ್ದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನತೆ ಭರ್ಜರಿ ವಿದಾಯ ನೀಡಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಮತವೂ ವಿಭಜನೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಖಿಲೇಶ್ ಯಾದವ್ ಹೇಳಿದರು.

ಈಗ ರದ್ದುಗೊಂಡಿರುವ ಚುನಾವಣಾ ಬಾಂಡ್‌ಗಳನ್ನು ಟೀಕಿಸಿದ ರಾಹುಲ್ ಗಾಂಧಿ, ಚುನಾವಣಾ ನಿಧಿಯಲ್ಲಿ ಪಾರದರ್ಶಕತೆಯನ್ನು ತರಲು ಈ ಯೋಜನೆಯನ್ನು ತರಲಾಗಿದೆ ಎಂದು ಪ್ರಧಾನಿ ಹೇಳಿಕೊಳ್ಳುತ್ತಾರೆ ಆದರೆ ಅದನ್ನು ಸುಪ್ರೀಂ ಕೋರ್ಟ್ ಏಕೆ ತಳ್ಳಿಹಾಕಿತು ಎಂದು ಕೇಳಿದರು.

SCROLL FOR NEXT