ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರ ಪರಿಣಾಮ ನೂತನವಾಗಿ ನಿರ್ಮಾಣವಾಗಿರುವ ಸಂಸತ್ ಭವನ ಕೂಡ ಸೋರಲು ಆರಂಭಿಸಿದೆ.
ಸಂಸತ್ ಭವನದ ಸುತ್ತ ಮುತ್ತಲು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಇದರ ಬೆನ್ನಲ್ಲೇ ಹಳೆಯ ಸಂಸತ್ ಭವನಕ್ಕೆ ಹೋಲಿಕೆ ಮಾಡಿ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿವೆ.
ಲೋಕಸಭೆಯ ಲಾಬಿಯಲ್ಲಿ ನೀರು ಸೋರಿಕೆ ಆಗುತ್ತಿರುವ ಬಗ್ಗೆ ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ ಅವರು ಈ ವಿಷಯದ ಕುರಿತು ಮುಂದೂಡಿಕೆ ನಿರ್ಣಯವನ್ನು ಮಂಡಿಸಿದರೆ, ಅಖಿಲೇಶ್ ಯಾದವ್ ಹೊಸ ಸಂಸತ್ತನ್ನು ನಿರ್ಮಿಸಲು ಕೋಟ್ಯಂತರ ಖರ್ಚು ಮಾಡಿದೆ ಎಂದು ಬಿಜೆಪಿಯನ್ನು ಲೇವಡಿ ಮಾಡಿದ್ದಾರೆ. ಅಲ್ಲದೆ, ಕಲಾಪವನ್ನು ಹಳೆಯ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಾಣಿಕ್ಕಂ ಟ್ಯಾಗೋರ್, ಸಂಸತ್ತಿನ ಹೊರಗೆ ಪೇಪರ್ ಲೀಕ್, ಒಳಗೆ ವಾಟರ್ ಲೀಕ್ ಎಂದು ಟೀಕಿಸಿದ್ದಾರೆ.
ಸಂಸತ್ ಭವನದಲ್ಲಿ ಇತ್ತೀಚೆಗೆ ಆಗುತ್ತಿರುವ ವಾಟರ್ ಲೀಕೇಜ್, ಹೊಸ ಬಿಲ್ಡಿಂಗ್ ಇನ್ನೂ ಹೊಸ ವಾತಾವರಣಕ್ಕೆ ಹೊಂದಿಕೊಂಡಿಲ್ಲ ಎನ್ನುವುದನ್ನು ತೋರಿಸಿದೆ. ಸಂಸತ್ ಭವನ ಪೂರ್ಣಗೊಂಡ ಒಂದೇ ವರ್ಷದಲ್ಲಿ ಈ ರೀತಿಯ ಸಮಸ್ಯೆ ಆಗಿದೆ ಎಂದು ಬರೆದಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಕನೌಜ್ ಸಂಸದ ಅಖಿಲೇಶ್ ಯಾದವ್ ಅವರು ಮುಂಗಾರು ಅಧಿವೇಶನದ ಉಳಿದ ಭಾಗವನ್ನು ಹಳೆಯ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಹೊಸ ಸಂಸತ್ತಿಗಿಂತ ಹಳೆಯ ಸಂಸತ್ತು ಉತ್ತಮವಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಸಂಸತ್ತಿನಲ್ಲಿ ನೀರು ಸುರಿಯುತ್ತಿರುವವರೆಗೂ ಹಳೆ ಸಂಸತ್ತಿನಲ್ಲಿ ಮತ್ತೆ ಏಕೆ ಕೆಲಸ ಮಾಡಬಾರದು ಎಂದು ಬರೆದಿದ್ದಾರೆ.