ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ರಸ್ತೆ ಹಾನಿಗೊಳಗಾಗಿದೆ. ಇದರಿಂದಾಗಿ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಗಂದರ್ಬಾಲ್ ಜಿಲ್ಲೆಯ ಕಚೆರ್ವಾನ್‌ನಲ್ಲಿ ರಸ್ತೆ ಹಾನಿಗೊಳಗಾದ ಕಾರಣ ಶ್ರೀನಗರ-ಲೇಹ್ ರಸ್ತೆಯಲ್ಲಿ ಸಂಚಾರವನ್ನು ಮುಂದಿನ ಸೂಚನೆಯ ತನಕ ಸ್ಥಗಿತಗೊಳಿಸಲಾಗಿದೆ ಎಂದು ಸಂಚಾರ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಧ್ಯರಾತ್ರಿ ಸಂಭವಿಸಿದ ಮೇಘಸ್ಪೋಟದಿಂದಾಗಿ ರಸ್ತೆಗಳು ಸಂಪೂರ್ಣ ಹಾಳಾಗಿವೆ ಎಂದು ಹೇಳಿದ್ದಾರೆ.
ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಿಂದಾಗಿ ವಸತಿ ಗೃಹಗಳು ಸೇರಿದಂತೆ ಕೆಲವು ಕಟ್ಟಡಗಳು ಹಾನಿಗೊಳಗಾಗಿವೆ. ಅಗತ್ಯವಿರುವವರಿಗೆ ಸಹಾಯ ಮತ್ತು ನೆರವು ನೀಡಲು ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ ಎಂದು ಅಧಿಕಾರಿ ಹೇಳಿದರು. ಹೆದ್ದಾರಿ ಸಂಚಾರ ಸ್ಥಗಿತಗೊಳಿಸಿರವುರಿಂದ ಲಡಾಖ್ ಕೇಂದ್ರಾಡಳಿತ ಪ್ರದೇಶದಿಂದ ಕಾಶ್ಮೀರ ಕಣಿವೆಯನ್ನು ಸಂಪರ್ಕ ಕಡಿತಗೊಂಡಿದೆ. ಅಮರನಾಥ ಯಾತ್ರೆಗಾಗಿ ಬಾಲ್ಟಾಲ್ ಬೇಸ್ ಕ್ಯಾಂಪ್ ಅನ್ನು ಸಹ ಪ್ರವೇಶಿಸಲಾಗುವುದಿಲ್ ಎಂದು ತಿಳಿಸಿದ್ದಾರೆ.