ಅನಂತನಾಗ್: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮೂವರು ಉಗ್ರರ ಸಹಚರರನ್ನು ಬಂಧಿಸಿದ್ದು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಷ್ಟ್ರೀಯ ರೈಫಲ್ 1 ಮತ್ತು ಸಿಆರ್ ಪಿಎಫ್ ಪಡೆ ಸಹಯೋಗದಲ್ಲಿ ಹಾಸನ್ ಪುರ ತುಲ್ಖಾನ್ ರಸ್ತೆಯಲ್ಲಿ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಉಗ್ರರ ಸಹಚರರನ್ನು ಬಂಧಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಂಧಿತರು ಹಾಸನ್ ಪುರ ತಾವೇಲಾ ನಿವಾಸಿಗಳು ಎನ್ನಲಾಗಿದೆ. ಬಂಧಿತರಿಂದ ಒಂದು ಪಿಸ್ತೂಲ್, ಒಂದು ಪಿಸ್ತೂಲ್ ಮ್ಯಾಗಜೀನ್, ಒಂದು ಗ್ರೆನೇಡ್ ಮತ್ತು ಒಂದು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದು ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
"ಈ ಜಂಟಿ ಕಾರ್ಯಾಚರಣೆಯು ಭಯೋತ್ಪಾದನೆಯನ್ನು ಎದುರಿಸುವಲ್ಲಿ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಾತರಿಪಡಿಸುವಲ್ಲಿ ಭದ್ರತಾ ಪಡೆಗಳ ಸಂಘಟಿತ ಪ್ರಯತ್ನವನ್ನು ಎತ್ತಿ ತೋರಿಸುತ್ತದೆ. ಉಗ್ರರ ಸಹಚರರ ಬಂಧನ ಜಿಲ್ಲೆಯಲ್ಲಿ ದೇಶ ವಿರೋಧಿ ಶಕ್ತಿಗಳ ತಡೆಯಲ್ಲಿ ಮಹತ್ವಪೂರ್ಣವಾದದ್ದಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಬಿಜ್‌ಬೆಹರಾ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಸೇರಿದಂತೆ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.