ಶಿಮ್ಲಾ: ಉತ್ತರಾಖಂಡ ಬೆನ್ನಲ್ಲೇ ಇದೀಗ ಹಿಮಾಚಲ ಪ್ರದೇಶದಲ್ಲೂ ಮೇಘಸ್ಫೋಟ ಸಂಭವಿಸಿದ್ದು, ಭಾರಿ ಮಳೆ ಮತ್ತು ಭೀಕರ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಮೇಘಸ್ಫೋಟವಾಗಿದ್ದು, ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಶಿಮ್ಲಾದ ರಾಂಪುರ ಬಳಿಯ ಪ್ರವಾಹ ಪೀಡಿತ ಸಮೇಜ್ ಗ್ರಾಮದಲ್ಲಿ ಪ್ರಸ್ತುತ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.
ಮೇಘಸ್ಫೋಟದ ಬಳಿಕ ಸುರಿದ ಭಾರಿಮಳೆಯಿಂದಾಗಿ ಪ್ರವಾಹ ಏರ್ಪಟ್ಟಿದ್ದು, ಇಲ್ಲಿನ ಸಮೇಜ್ ಗ್ರಾಮ ಸೇರಿದಂತೆ ಹಲವು ಗಿರಿಧಾಮಗಳು ಮುಳುಗಡೆಯಾಗಿವೆ.
ರಾಷ್ಟ್ರೀಯ ಹೆದ್ದಾರಿ 3 ರ ಜಿನ್ಸಿಂಗ್ ಬಾರ್ ಬಳಿ ಹಠಾತ್ ಪ್ರವಾಹದಿಂದಾಗಿ ರಸ್ತೆಯನ್ನು ನಿರ್ಬಂಧಿಸಲಾಗಿದೆ ಎಂದು ಲಾಹುಲ್ ಸ್ಪಿತಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಅಂತೆಯೇ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗದ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ.
ಇದಕ್ಕೂ ಮುನ್ನ ಭಾನುವಾರ, ಆಗಸ್ಟ್ 1 ರಂದು ಮೇಘಸ್ಫೋಟದಲ್ಲಿ ಕೊಚ್ಚಿಹೋದ ಕುಲು-ಮನಾಲಿ ಹೆದ್ದಾರಿಯಲ್ಲಿ ಇದೀಗ ಸಂಚಾರಕ್ಕೆ ಒಂದು ಮಾರ್ಗವನ್ನು ಮಾತ್ರ ತೆರೆಯಲಾಗಿದೆ. ಈ ಬಗ್ಗೆ ಕುಲು ಡೆಪ್ಯುಟಿ ಕಮಿಷನರ್ ತೋರುಲ್ ಎಸ್ ರವೀಶ್ ಮಾಹಿತಿ ನೀಡಿದ್ದು, ರಾಷ್ಟ್ರೀಯ ಹೆದ್ದಾರಿಯು ಹೆಚ್ಚು ಹಾನಿಗೊಳಗಾಗಿದೆ, ಆದರೆ ಅದನ್ನು ಒಂದೇ ಪಥಕ್ಕೆ ಮರುಸ್ಥಾಪಿಸಲಾಗಿದೆ.
ನಿರ್ಮಂದ್ ಪ್ರದೇಶವು ಹೆಚ್ಚು ಹಾನಿಗೊಳಗಾಗಿದೆ. ಬಾಗಿಪುಲ್‌ನಲ್ಲಿ ನವೀಕರಣ ಕಾರ್ಯ ನಡೆಯುತ್ತಿದೆ. ಪ್ರವಾಹದಲ್ಲಿ ಇಬ್ಬರು ನಾಪತ್ತೆಯಾಗಿದ್ದು, ಆ ಮೂಲಕ ಈ ವರೆಗೂ ನಾಪತ್ತೆಯಾದವರ ಸಂಖ್ಯೆ 11 ಕ್ಕೆ ಏರಿದೆ. ಅಂತೆಯೇ 20 ಸೇತುವೆಗಳನ್ನು ಅರಣ್ಯ ಇಲಾಖೆಯು ತಾತ್ಕಾಲಿಕವಾಗಿ ಮರುಸ್ಥಾಪನೆ ಮಾಡಿದೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಶನಿವಾರ ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ಪೀಡಿತ ಪ್ರದೇಶಗಳಲ್ಲಿ ಸುಮಾರು 50 ಜನರು ಸಾವನ್ನಪ್ಪಿರುವ ಶಂಕೆ ಇದೆ ಮತ್ತು ಅಧಿಕೃತ ದೃಢೀಕರಣ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಿದ ನಂತರವೇ ಅಧಿಕೃತ ಸಂಖ್ಯೆಯನ್ನು ಘೋಷಿಸಬಹುದು ಎಂದು ಹೇಳಿದರು.