ವಯನಾಡು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ ಪ್ರಕರಣದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕಳೆದ 10 ದಿನಗಳಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭಾರತೀಯ ಸೇನೆ ಇದೀಗ ಕಾರ್ಯಾಚರಣೆ ಪೂರ್ಣಗೊಳಿಸಿ ವಾಪಸ್ ತೆರಳಿದ್ದು, ಸ್ಥಳೀಯರು ಕಣ್ಣೀರು ಹಾಕುತ್ತಾ ಸೈನಿಕರನ್ನು ಕಳುಹಿಸಿಕೊಟ್ಟಿದ್ದಾರೆ.
ಪ್ರಕೃತಿಯ ಸೌಂದರ್ಯದಿಂದ ಕಂಗೊಳಿಸುತ್ತಿದ್ದ ವಯನಾಡ್ ಭಯಾನಕ ಭೂಕುಸಿತದಿಂದ ಸ್ಮಶಾನದಂತೆ ಆಗಿತ್ತು. ನೂರಾರು ಜೀವಗಳು ಮಣ್ಣಿನಡಿ ಸಿಲುಕಿ ಪ್ರಾಣ ಬಿಟ್ಟಿದ್ದರು. ಇನ್ನೂ ಕೆಲವರು ಕೈಯಲ್ಲಿ ಜೀವ ಹಿಡಿದು ದೇವರಾದರೂ ಬಂದು ನಮ್ಮನ್ನು ಉಳಿಸಲಿ ಎಂದು ಪ್ರಾರ್ಥಿಸಿದ್ದರು. ಆದರೆ ದೇವರ ರೂಪದಲ್ಲಿ ಬಂದು ಸಂಕಷ್ಟದಲ್ಲಿದ್ದ ಜನರನ್ನು ಭಾರತೀಯ ಸೇನೆಯ ಸೈನಿಕರು ರಕ್ಷಿಸಿದ್ದರು. ಭೂಕುಸಿತ ಸಂಭವಿಸಿದ ದಿನದಿಂದ ಇಂದಿನವರೆಗೆ 10 ದಿನಗಳ ಕಾಲ ಯೋಧರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು.
ದಾಖಲೆಯ ಅವಧಿಯಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದ ಯೋಧರು
ಇನ್ನು ರಕ್ಷಣಾ ಕಾರ್ಯಾಚರಣೆ ವೇಳೆ ಸೈನಿಕರು ರಾತ್ರೋ ರಾತ್ರಿ ಕಬ್ಬಿಣದ ಸೇತುವೆ ನಿರ್ಮಿಸಿದ್ದರು. ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗಲು ಭಾರತೀಯ ಸೇನೆಯು 119 ಅಡಿ ಉದ್ದದ ತಾತ್ಕಾಲಿಕ ಸೇತುವೆಯ ನಿರ್ಮಾಣವನ್ನು ದಾಖಲೆ ಸಮಯದಲ್ಲಿ ನಿರ್ಮಿಸಿತ್ತು. ಚೂರಲ್ಮಲ ಹಾಗೂ ಮುಂಡಕ್ಕೈ ಗ್ರಾಮಕ್ಕೆ ಸುಲಭವಾಗಿ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಇರುವಂಜಿಪ್ಪುಳ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.
ಸೇತುವೆ ನಿರ್ಮಾಣ ಕಾಮಗಾರಿ ಕಳೆದ ಬುಧವಾರ ರಾತ್ರಿ 9.30ಕ್ಕೆ ಆರಂಭವಾಗಿದ್ದು, ಗುರುವಾರ ಸಂಜೆ 5.30ಕ್ಕೆ ಪೂರ್ಣಗೊಂಡಿದೆ. ಕಮಾಂಡರ್ ವಾಹನವನ್ನು ಅನುಸರಿಸಿ, ಸೇನಾ ವೈದ್ಯಕೀಯ ಘಟಕ ಮತ್ತು ಮಿಲಿಟರಿ ಟ್ರಕ್ ಸೇತುವೆಯ ಮೂಲಕ ಹಾದು ಹೋದವು.
ಭಾವುಕ ಬೀಳ್ಕೊಡುಗೆ
ಇದೀಗ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಇಂದು ವಯನಾಡಿನಿಂದ ಸೈನಿಕರು ತಮ್ಮ ಕ್ಯಾಂಪ್ ಗೆ ಮರಳಿದ್ದಾರೆ. ಈ ವೇಳೆ ಯೋಧರಿಗೆ ಜನರಿಂದ ಭಾವನಾತ್ಮಕ ಬಿಳ್ಕೊಡುಗೆ ದೊರೆಯಿತು. ಶಾಲೆಯೊಂದರಲ್ಲಿ ಬೀಡು ಬಿಟ್ಟಿದ್ದ ಸೈನಿಕರು ತಮ್ಮ ಸರಕು ಸರಂಜಾಮುಗಳನ್ನು ತೆಗೆದುಕೊಂಡು ತಮ್ಮ ತಮ್ಮ ಸೇನಾ ವಾಹನಗಳತ್ತೆ ಸಾಲಾಗಿ ತೆರಳುತ್ತಿದ್ದಂತೆಯೇ ಅಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸ್ಥಳೀಯರು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಚಪ್ಪಾಳೆಯ ಮೂಲಕ ಜನ ಧನ್ಯವಾದ ತಿಳಿಸಿದರು. ಇದನ್ನು ಕಂಡ ಯೋಧರ ಮೊಗದಲ್ಲೂ ಧನ್ಯತಾ ಭಾವವಿತ್ತು. ಕೆಲವರಂತೂ ಕಣ್ಣೀರು ಹಾಕಿ, ಕೈ ಮುಗಿದು ಯೋಧರಿಗೆ ವಿದಾಯ ಹೇಳಿದರು.
ವಯನಾಡ್ ಜಿಲ್ಲಾಡಳಿತವು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯ ಭಾಗವಾಗಿದ್ದ ಭಾರತೀಯ ಸೇನಾ ಸಿಬ್ಬಂದಿಗೆ ಬೀಳ್ಕೊಡುಗೆಯನ್ನು ಆಯೋಜಿಸಿತ್ತು. ಜನರು ಬೀಳ್ಕೊಡುತ್ತಿರುವ ವೀಡಿಯೊವನ್ನು ಸೇನಾ PRO ಹಂಚಿಕೊಂಡಿದ್ದಾರೆ. ''ಭೂಕುಸಿತ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಎಲ್ಲವನ್ನೂ ಪಣಕ್ಕಿಟ್ಟ ನಮ್ಮನ್ನು ರಕ್ಷಿಸಿದ ವೀರರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ…ನಿಮ್ಮ ಧೈರ್ಯ ಮತ್ತು ತ್ಯಾಗವನ್ನು ಮರೆಯಲಾಗುವುದಿಲ್ಲ" ಎಂದು PRO ಟ್ವೀಟ್ ಮಾಡಿದ್ದಾರೆ.