ಜಲಂಧರ್: ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಎಲ್ಲೆಡೆ ಹದ್ದಿನ ಕಣ್ಣು ಇಟ್ಟಿರುವಂತೆಯೇ ಪಂಜಾಬ್ ಗಡಿಯಿಂದ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಶಂಕಿತ ಪಾಕ್ ನುಸುಳುಕೋರನನ್ನು ಬಿಎಸ್ಎಫ್ ಗುಂಡಿಕ್ಕಿ ಕೊಂದಿದೆ.
ಸೋಮವಾರ ರಾತ್ರಿ 8:30 ರ ಸುಮಾರಿಗೆ ತರ್ನ್ ತರನ್ ಜಿಲ್ಲೆಯ ದಾಲ್ ಗ್ರಾಮದಲ್ಲಿ ವ್ಯಕ್ತಿಯೋರ್ವ ಅಂತಾರಾಷ್ಟ್ರೀಯ ಗಡಿ ದಾಟಿ ಗಡಿ ಬೇಲಿಯನ್ನು ಸಮೀಪಿಸುತ್ತಿರುವುದು ಕಂಡು ಬಂದಿತು. ಆತ ಗಡಿ ದಾಟದಂತೆ ಬಿಎಸ್‌ಎಫ್ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಆದರೆ ಆತ ನಿಲ್ಲದೆ ಗಡಿ ಭದ್ರತಾ ಬೇಲಿಯತ್ತ ನಡೆದು ಬಂದಿದ್ದಾನೆ.
ಸಂಭಾವ್ಯ ಅಪಾಯವನ್ನು ಅರಿತು ಹಾಗೂ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಗಡಿಯಲ್ಲಿ ಹೈ ಅಲರ್ಟ್ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಸೈನಿಕರು ನುಸುಳುಕೋರನ ಮೇಲೆ ಗುಂಡು ಹಾರಿಸಿ ಹತ್ಯೆಗೈದಿರುವುದಾಗಿ ಗಡಿ ಭದ್ರತಾ ಪಡೆಯ ಸೇನಾ ವಕ್ತಾರರು ತಿಳಿಸಿದ್ದಾರೆ.
ಗಡಿದಾಟಿ ದುಷ್ಕತ್ಯವೆಸಗುವ ಗಡಿಯಾಚೆಗಿನ ಉಗ್ರರ ಉದ್ದೇಶವನ್ನು ಬಿಎಸ್ಎಫ್ ಪಡೆಗಳು ಮತ್ತೊಮ್ಮೆ ವಿಫಲಗೊಳಿಸಿವೆ ಎಂದು ಅವರು ಹೇಳಿದ್ದಾರೆ. ಪಂಜಾಬ್‌ನ 553 ಕಿಲೋಮೀಟರ್ ಉದ್ದದ ಭಾರತ-ಪಾಕಿಸ್ತಾನ ಗಡಿ ಕಾಯುತ್ತಿರುವ ಬಿಎಸ್‌ಎಫ್, ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆಗಸ್ಟ್ 10 ರಿಂದ ಪ್ರಮುಖ ಸ್ಥಳಗಳಲ್ಲಿ ಹೈ ಅಲರ್ಟ್ ಘೋಷಿಸಿದೆ.